ಗ್ರಾಮ ಪಂಚಾಯತಿಗೊಂದು ಸಹಕಾರ ಸಂಘ: ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು, ಮಾ.15: ರಾಜ್ಯದಲ್ಲಿ ಪಂಚಾಯತಿಗೆ ಒಂದರಂತೆ ಸಹಕಾರಿ ಸಂಘಗಳನ್ನು ಸ್ಥಾಪಿಸಲು ಸರಕಾರ ನಿರ್ದೇಶನ ನೀಡಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ತಿನ ಕಲಾಪದಲ್ಲಿ ನಿರಾಣಿ ಹನುಮಂತಪ್ಪ ರುದ್ರಪ್ಪ ಪ್ರಶ್ನೆಗೆ ಉತ್ತರಿಸಿದ ಅವರು, 10ರಿಂದ 15 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳಿಗೆ ಒಂದಕ್ಕಿಂತ ಹೆಚ್ಚು ಸಹಕಾರ ಸಂಘಗಳನ್ನು ನೀಡಲು ಸೂಚಿಸಲಾಗಿದೆ. ಈ ಸಂಬಂಧ ಸಹಕಾರ ಸಂಘಗಳ ನಿಬಂಧಕರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ 5783 ಸಹಕಾರ ಸಂಘಗಳಿದ್ದು, ಅದರಲ್ಲಿ 4780 ಸಹಕಾರ ಸಂಘಗಳು ಲಾಭದಲ್ಲಿವೆ. 1003 ಸಹಕಾರ ಸಂಘಗಳು ನಷ್ಟದಲ್ಲಿವೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆ ಮಾಡಲು ಸರ್ಕಾರ ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಅದರಂತೆ ಪ್ರತಿ ಸಂಘ ಕನಿಷ್ಠ 4 ಸಾವಿರ ಎಕರೆ ಸಾಗುವಳಿ ಭೂಮಿ ಹೊಂದಿರಬೇಕು.
ಸಂಘದ ಕಾರ್ಯಕ್ಷೇತ್ರ ಸ್ಥಾನದಿಂದ ಕನಿಷ್ಠ 5 ಕಿ.ಮೀ. ಪರಿಧಿ ಹೊಂದಿರಬೇಕು. ಹಾಗೂ ಕನಿಷ್ಠ 600 ರೈತ ಕುಟುಂಬಗಳನ್ನು ಒಳಗೊಂಡಿರುವುದು ಸೇರಿದಂತೆ ಹಲವು ನಿಬಂಧನೆ ವಿಧಿಸಿದ್ದು, ಪ್ರತಿ ಸಂಘ ಕನಿಷ್ಠ 20 ಲಕ್ಷದಷ್ಟು ಅಲ್ಪಾವಧಿ ಸಾಲ ನೀಡುವ ಸಾಮರ್ಥ್ಯವನ್ನು ಹೊಂದಿರಬೇಕು ಎಂದು ಅವರು ಮಾಹಿತಿ ನೀಡಿದರು.





