ಸುರತ್ಕಲ್ ಟೋಲ್‌ಗೇಟ್ ಎನ್‌ಎಂಪಿಟಿಯೊಳಗೆ ಸ್ಥಳಾಂತರ: ಸಂಸದ ನಳಿನ್ ಕುಮಾರ್

ಮಂಗಳೂರು : ಸಾರ್ವಜನಿಕರ ಹಿತದೃಷ್ಠಿಯಿಂದ ಸುರತ್ಕಲ್ ಟೋಲ್‌ಗೇಟನ್ನು ಎನ್‌ಎಂಪಿಟಿಯೊಳಗೆ ಸ್ಥಳಾಂತರಿಸಲು ಮಂಗಳವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುರತ್ಕಲ್ ಟೋಲ್ ವಿಚಾರದ ಬಗ್ಗೆ ಚರ್ಚಿಸಲಾಯಿತು.
ಎನ್‌ಎಂಪಿಟಿಯ ಒಳಗೆ ಬರುವ ಹಾಗೂ ಹೊರಗೆ ಹೋಗುವ ವಾಹನಗಳಿಂದ ಮಾತ್ರ ಟೋಲ್ ಸಂಗ್ರಹಿಸಲು ಸಚಿವರು ಸೂಚಿಸಿದರು. ಅಲ್ಲದೆ ಮಾಣಿ-ಸಂಪಾಜೆ-ಮಡಿಕೇರಿ ಸಂಪರ್ಕಿಸುವ ರಸ್ತೆಯನ್ನು ಮಾಣಿಯಿಂದ ಸಂಪಾಜೆವರೆಗೆ ಚತುಷ್ಪಥ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಹಾಗೂ ಸಂಪಾಜೆಯಿಂದ ಮಡಿಕೇರಿವರೆಗಿನ ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆಯೂ ಸಚಿವ ನಿತಿನ್ ಗಡ್ಕರಿ ಆದೇಶಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ ಆರ್.ಕೆ ಪಾಂಡೆ, ಹೆಚ್ಚುವರಿ ಕಾರ್ಯದರ್ಶಿ ಗೋ ಸಾಹೇಲ್, ರಾ.ಹೆ.ಸದಸ್ಯ (ಟೋಲ್ ವಿಭಾಗ) ಮಹಾವೀರ್ ಸಿಂಗ್, ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಂಸದರಾದ ಪ್ರತಾಪ್ ಸಿಂಹ, ಮುನಿಸ್ವಾಮಿ ಉಪಸ್ಥಿತರಿದ್ದರು.