ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ತೀರ್ಪು ಪಾಲನೆ ಎಲ್ಲರ ಕರ್ತವ್ಯ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮಾ. 15: ‘ಹಿಜಾಬ್(ಸ್ಕಾರ್ಫ್), ಕೇಸರಿ ಶಾಲು ಗಲಾಟೆಯಿಂದ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆ, ಕಂಗೆಟ್ಟಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಿದ್ದೆ. ಕಾಕತಾಳೀಯ ಎಂಬಂತೆ ಇಂದು ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ಬಂದಿದ್ದು, ಮಕ್ಕಳ ಶಿಕ್ಷಣ ಬಹಳ ಮುಖ್ಯ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನ್ಯಾಯಾಲಯ ನೀಡಿರುವ ಆದೇಶವನ್ನು ಪಾಲನೆ ಮಾಡಬೇಕಾದ್ದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಸರಕಾರ ಮಕ್ಕಳ ಭವಿಷ್ಯದ ಬಗ್ಗೆ ನಿರ್ಲಕ್ಷ್ಯ ಬೇಡ ಹಾಗೂ ಹಳಿತಪ್ಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿ ಮಾಡಿ ಮಕ್ಕಳ ಭವಿಷ್ಯಕ್ಕೆ ಒಳ್ಳೆಯದು ಮಾಡಬೇಕು' ಎಂದು ಒತ್ತಾಯಿಸಿದರು.
‘ಶಾಲಾ ಕಾಲೇಜುಗಳಲ್ಲಿ ಅಹಿತಕರ ವಾತಾವರಣ ಇತ್ತು. ಸಮವಸ್ತ್ರದ ಕಾರಣಕ್ಕೆ ಸಮಾಜದಲ್ಲಿ ಅಶಾಂತಿ ಉಂಟಾಗಿತ್ತು. ಶಿಕ್ಷಣ ವ್ಯವಸ್ಥೆ ಹಾಳಾಗಿತ್ತು. ಇದನ್ನು ಸರಿದಾರಿಗೆ ತರುವ ಉದ್ದೇಶದಿಂದ ನಿಲುವಳಿ ಮಂಡಿಸಿದ್ದೇನೆ. ಸದನದಲ್ಲಿ ಈ ಬಗ್ಗೆ ನಾಳೆ ಚರ್ಚೆ ಮಾಡುತ್ತೇನೆ. ಸ್ಪೀಕರ್ ಅವಕಾಶ ನೀಡುತ್ತಾರೆಂದು ನಂಬಿದ್ದೇನೆ. ಹಿಂಸಾಚಾರ ಮತ್ತು ಗಲಾಟೆಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಆತಂಕದ ಪರಿಸ್ಥಿತಿ ಇದೆ. ಇದೆಲ್ಲವೂ ಸರಿ ಹೋಗಬೇಕಿದೆ' ಎಂದು ಕುಮಾರಸ್ವಾಮಿ ನುಡಿದರು.
‘ಕಾಂಗ್ರೆಸ್ ಪಕ್ಷದವರೂ ಕಾನೂನು ಹದಗೆಟ್ಟಿರುವ ಬಗ್ಗೆ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸುತ್ತಾರೆಂಬ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದೆ. ಮಂಡಿಸಲಿ, ಜನರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿ. ನನ್ನದೇನೂ ತಕರಾರಿಲ್ಲ. ರಾಜ್ಯದಲ್ಲಿ ಶಾಂತಿ-ಸಾಮರಸ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ' ಎಂದು ಪ್ರತಿಕ್ರಿಯೆ ನೀಡಿದರು.







