ಹಿಜಾಬ್ ಕುರಿತ ತೀರ್ಪಿನಿಂದ ನಮಗೆ ಅನ್ಯಾಯ: ಹೈಕೋರ್ಟ್ ಅರ್ಜಿದಾರ ವಿದ್ಯಾರ್ಥಿನಿಯರಿಂದ ಅಸಮಾಧಾನ

ಉಡುಪಿ : ನಮ್ಮ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಾವು ತುಂಬಾ ಭರವಸೆ ಹೊಂದಿದ್ದೆವು. ನಮಗೆ ನಮ್ಮ ಸಂವಿಧಾನ ನೀಡಿರುವ ಧಾರ್ಮಿಕ ಹಕ್ಕು ಸಿಗುತ್ತದೆ ಎಂಬ ವಿಶ್ವಾಸ ಇತ್ತು. ಆದರೆ ತೀರ್ಪು ನಮ್ಮ ಪರವಾಗಿ ಬಾರದೆ ವಿರುದ್ಧವಾಗಿ ಬಂದಿದೆ. ಇದರಿಂದ ನಾವು ನಮ್ಮ ಹಕ್ಕಿಂದ ವಂಚಿತರಾಗಿದ್ದೇವೆ. ಈ ಮೂಲಕ ನಮಗೆ ಅನ್ಯಾಯವಾಗಿದೆ ಎಂದು ಹೈಕೋಟ್ ಅರ್ಜಿದಾರರಾದ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಮ್ಮ ಹಕ್ಕನ್ನು ನಿರಾಕರಿಸಿದೆ. ನಾವು ಹಿಜಾಬ್ ಹಾಕದೆ ಯಾವುದೇ ಕಾರಣಕ್ಕೂ ತರಗತಿಗೆ ಹೋಗುವುದಿಲ್ಲ. ನಮಗೆ ಹಿಜಾಬ್ ಹಾಕಲು ಅವಕಾಶ ನೀಡಬೇಕು. ನಾವು ಅದಕ್ಕಾಗಿ ಹೋರಾಟ ಮುಂದುವರೆಸುತ್ತೇವೆ. ಇದು ನಮ್ಮ ಆರು ಮಂದಿ ವಿದ್ಯಾರ್ಥಿನಿಯರ ಒಮ್ಮತ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.
ಹಿಜಾಬ್ ಧರ್ಮ ಕಡ್ಡಾಯ
ವಿದ್ಯಾರ್ಥಿನಿ ಅಲ್ಮಾಝ ಮಾತನಾಡಿ, ಹಿಜಾಬ್ ಇಸ್ಲಾಮಿನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಆದರೆ ಹಿಜಾಬ್ ಇಸ್ಲಾಮಿನಲ್ಲಿ ಕಡ್ಡಾಯವಾಗಿದೆ ಎಂದು ಕುರಾನ್‌ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿಚಾರಣೆ ಸಂದರ್ಭ ನಮ್ಮ ವಕೀಲರು ಪ್ರಸ್ತಾಪಿ ಸಿದ್ದ ಈ ವಿಚಾರವನ್ನು ನ್ಯಾಯಮೂರ್ತಿಗಳು ಆಲಿಸಿದ್ದರು. ಆದರೆ ತೀರ್ಪುನಲ್ಲಿ ಮಾತ್ರ ಹಿಜಾಬ್ ಇಸ್ಲಾಮಿನ ಅಗತ್ಯ ಭಾಗವಲ್ಲ ಎಂಬ ವಿಚಾರ ಹೇಗೆ ಬಂತು ಗೊತ್ತಿಲ್ಲ. ಇಸ್ಲಾಮಿ ನಲ್ಲಿ ಹಿಜಾಬ್ ಕಡ್ಡಾಯ ಅಲ್ಲ ಎಂಬುದು ಸುಳ್ಳು ಎಂದರು.
ನಮಗೆ ಧರ್ಮ ಮತ್ತು ಶಿಕ್ಷಣ ಎರಡು ಕೂಡ ಮುಖ್ಯವಾಗಿದೆ. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ನಮಗೆ ನಮ್ಮ ಧಾರ್ಮಿಕ ಹಕ್ಕನ್ನು ನೀಡಲಾಗಿದೆ. ಹಾಗಾಗಿ ನಾವು ನಮ್ಮ ಸಂವಿಧಾನ ಮೇಲೆ ಸಾಕಷ್ಟು ನೀರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ನಮಗೆ ಈ ತೀರ್ಪು ನಿರಾಶೆ ಮಾಡಿದೆ. ಅಂಬೇಡ್ಕರ್ ಇಂದು ಜೀವಂತವಾಗಿದ್ದರೆ ಈ ತೀರ್ಪು ನೋಡಿ ಕಣ್ಣೀರು ಹಾಕುತ್ತಿದ್ದರೆಂದು ಅವರು ತಿಳಿಸಿದರು.
ಪರೀಕ್ಷೆಗೆ ಎಲ್ಲ ತಯಾರಿ
ನಾವು ಪರೀಕ್ಷೆಗೆ ಬೇಕಾದ ಎಲ್ಲ ರೀತಿಯ ತಯಾರಿಯನ್ನು ಮನೆಯಲ್ಲಿಯೇ ಕುಳಿತು ಮಾಡಿದ್ದೇವೆ. ನಮಗೆ ಹಿಜಾಬ್ ಹಾಕಿ ಪರೀಕ್ಷೆ ಬರೆಯಲು ಅವಕಾಶ ನೀಡುವುದು ಸರಕಾರ ಹಾಗೂ ಕಾಲೇಜಿನ ಮೇಲೆ ಅವಲಂಬಿತವಾಗಿದೆ ಎಂದು ವಿದ್ಯಾರ್ಥಿನಿ ಅಲ್ಮಾಝ ಹೇಳಿದರು.
ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ ಎಂದು ಪ್ರಶ್ನಿಸುವವರು, ಶಿಕ್ಷಣ ಮುಖ್ಯವೋ ಅಥವಾ ಸಮವಸ್ತ್ರ ಮುಖ್ಯವೋ ಎಂದು ಸರಕಾರವನ್ನು ಮೊದಲು ಪ್ರಶ್ನಿಸಲಿ. ಶಿಕ್ಷಣ ಮುಖ್ಯವಾದರೆ ನಮಗೆ ಯಾಕೆ ಶಿಕ್ಷಣವನ್ನು ನಿರಾಕರಿಸಲಾಗುತ್ತಿದೆ. ಈ ಮೂಲಕ ನಮ್ಮನ್ನು ಯಾಕೆ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ವಿದ್ಯಾರ್ಥಿನಿ ಆಲಿಯಾ ಅಸಾದಿ ಮಾತನಾಡಿ, ಹಿಜಾಬ್ ನಮ್ಮ ಧರ್ಮದಲ್ಲಿ ಕಡ್ಡಾಯವಲ್ಲದಿದ್ದರೆ ನಾವು ಇಷ್ಟು ಹೋರಾಟ ಮಾಡುತ್ತಿರಲಿಲ್ಲ. ಇಷ್ಟೆಲ್ಲ ಸಮಸ್ಯೆ ಗಳನ್ನು ಎದುರಿಸುತ್ತರಿಲಿಲ್ಲ. ನಮಗೆ ಶಿಕ್ಷಣ ಕೂಡ ಅತಿಅಗತ್ಯವಾಗಿದ್ದು, ಅದಕ್ಕಾಗಿ ನಾವು ಸಾಧ್ಯವಾದಷ್ಟು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿನಿಯರಾದ ಸಫಾ, ಮುಸ್ಕಾನ್, ರೇಶಾಮ್ ಉಪಸ್ಥಿತರಿದ್ದರು.
ಹಿಜಾಬ್ ಮಾತ್ರವಲ್ಲ ಶಿಕ್ಷಣದಿಂದಲೂ ವಂಚಿತ !
ಕಾಲೇಜಿನ ಆವರಣದೊಳಗೆ ಪರಿಹರಿಸಬೇಕಾದಂತಹ ಈ ವಿಚಾರವನ್ನು ತಮ್ಮ ರಾಜಕೀಯ ಮೈಲೇಜ್‌ಗಾಗಿ ಕೋಮು ವಿವಾದವನ್ನಾಗಿ ಮಾಡಲಾಗಿದೆ. ನಮ್ಮ ಪ್ರಾಂಶುಪಾಲರು ಹಾಗೂ ಕೆಲವು ಉಪನ್ಯಾಸಕರು ಹಿಜಾಬ್ ಹಾಕಿ ತರಗತಿ ಪ್ರವೇಶ ನಿರಾಕರಿಸಿದ ಪರಿಣಾಮ ಇಂದು ರಾಜ್ಯ ಹಲವು ವಿದ್ಯಾರ್ಥಿ ಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ವಿವಾದದಿಂದ ಮುಂದೆ ಹೆತ್ತವರು ಕೂಡ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಹಿಂದೇಟು ಹಾಕಲಿದ್ದಾರೆ. ಈ ಮೂಲಕ ಹಿಜಾಬ್ ಮಾತ್ರವಲ್ಲ ನಮ್ಮ ಶಿಕ್ಷಣವನ್ನೇ ಕಸಿದುಕೊಳ್ಳಲಾಗಿದೆ ಎಂದು ವಿದ್ಯಾರ್ಥಿನಿ ಆಲಿಯಾ ಅಸಾದಿ ದೂರಿದರು.
ನಾವು ಕಾಲೇಜು ಪ್ರಾಂಶುಪಾಲರು, ಡಿಡಿಪಿಯು, ಜಿಲ್ಲಾಧಿಕಾರಿ ಮಟ್ಟದಲ್ಲಿ ಹೋರಾಟ ಮಾಡಿ ನ್ಯಾಯ ಸಿಗದಿದ್ದಾಗ ಹೈಕೋರ್ಟ್ ಮೆಟ್ಟಿಲೇರಿದ್ದೇವು. ಆ ಬಳಿಕ ಸರಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಿತು. ಬಳಿಕ ಇದನ್ನು ಕೋಮು ವಿವಾದವನ್ನಾಗಿ ಮಾಡಲಾಯಿತು. ಸರಕಾರ ಈ ಮೂಲಕ ಒತ್ತಡ ಹೇರಿ ಉದ್ದೇಶ ಪೂರ್ವಕವಾಗಿ ನಮ್ಮ ವಿರುದ್ಧ ತೀರ್ಪು ಬರುವ ರೀತಿ ಮಾಡಿದೆ ಎಂದು ಅವರು ಆರೋಪಿಸಿದರು.
‘ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ನಮ್ಮ ನ್ಯಾಯವಾದಿ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ನಾವು ನಮ್ಮ ಕಾನೂನಾತ್ಮಕವಾಗಿಯೇ ಹೋರಾಟವನ್ನು ಮುಂದುವರೆಸುತ್ತೇವೆ’
-ಆಲಿಯಾ ಅಸಾದಿ
