ಬ್ರಹ್ಮಾವರ: ಕ್ಯಾನ್ಸರ್ ತಪಾಸಣಾ, ಮಾಹಿತಿ ಶಿಬಿರ

ಉಡುಪಿ : ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆ ಮತ್ತು ಎಸ್. ಯುವ ರೆಡ್‌ಕ್ರಾಸ್ ಘಟಕ ಎಸ್‌ಎಂಎಸ್ ಕಾಲೇಜು ಬ್ರಹ್ಮಾವರದ ಸಹಾಯೋಗದೊಂದಿಗೆ ಇತ್ತೀಚೆಗೆ ಉಚಿತ ಕ್ಯಾನ್ಸರ್ ತಪಾಸಣಾ ಮತ್ತು ಮಾಹಿತಿ ಶಿಬಿರ ಬ್ರಹ್ಮಾವರ ಎಸ್‌ಎಂಎಸ್ ಕಾಲೇಜಿನ ಮಿನಿ ಸಭಾಂಗಣ ದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ನುರಿತ ಪ್ರಥಮ ಚಿಕಿತ್ಸಾ ತರಬೇತುದಾರ ಹಾಗೂ ಎಲುಬು ಮತ್ತು ಮೂಳೆ ತಜ್ಙ ಡಾ.ಸುರೇಶ್ ಶೆಣೈ ಮಾತನಾಡಿ, ಕ್ಯಾನ್ಸರ್ ರೋಗದ ನಿರ್ಮೂಲನೆ ಮತ್ತು ಅದರ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆ.೪ನ್ನು ವಿಶ್ವ ಕ್ಯಾನ್ಸರ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಲಿಂಗಬೇಧವಿಲ್ಲದೆ, ವಯೋಬೇಧವಿಲ್ಲದೆ ನಿರ್ದಿಷ್ಟ ಕಾರಣಗಳಿಲ್ಲದೆ ಯಾವುದೇ ಅಂಗವನ್ನು ಬಾಧಿಸಬಹುದಾದ ಕಾಯಿಲೆ ಎಂದರೆ ಅದು ಕ್ಯಾನ್ಸರ್ ಎಂದರು.
ಕ್ಯಾನ್ಸರ್ ಕಾಯಿಲೆ ವಿರುದ್ಧ ಹೋರಾಡುವುದು ಸುಲಭವಲ್ಲ. ಮನೋಬಲದ ಜೊತೆಗೆ ದೇಹಬಲವೂ ಅಗತ್ಯ. ಆತ್ಮಸ್ಥೈರ್ಯ ಕಳೆದುಕೊಳ್ಳದೇ ಸೂಕ್ತ ಬದಲಾವಣಾ ಕ್ರಮಗಳನ್ನು ಅನುಸರಿಸಿ ರೋಗದ ಭಯಾನಕತೆಯಿಂದ ಬಿಡುಗಡೆ ಪಡೆಯಬಹುದು ಎಂದ ಅವರು ಕ್ಯಾನ್ಸರ್ ಕಾಯಿಲೆ ಹರಡುವ ವಿಧಾನದ ಕುರಿತು ಮಾಹಿತಿ ನೀಡಿದರು.
ಬ್ರಹ್ಮಾವರ ಎಸ್‌ಎಂಎಸ್ ಕಾಲೇಜು ಪ್ರಾಂಶುಪಾಲ ಪ್ರೊ.ಪ್ರಸನ್ನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ, ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಪ್ರಕಾಶ್ ನಾಯಕ್ ಮತ್ತು ಮಹಿಳಾ ಘಟಕದ ಸಂಯೋಜನಾಧಿಕಾರಿ ವನಿತಾ ಶೆಟ್ಟಿ ಉಪಸ್ಥಿತರಿದ್ದರು.
ಸುಚಿತ್ರ ಸ್ವಾಗತಿಸಿ, ಅಕ್ಷಯ್ ವಂದಿಸಿದರು.







