ಯುವಕ ಸಹಿತ ಮೂವರು ಫೆಲೆಸ್ತೀನ್ ಪ್ರಜೆಗಳನ್ನು ಹತ್ಯೆಗೈದ ಇಸ್ರೇಲ್ ಸೇನೆ: ವರದಿ

photo courtesy:twitter/@Rehan_Alfarra98
ಜೆರುಸಲೇಮ್, ಮಾ.15: ಆಕ್ರಮಿತ ಪಶ್ಚಿಮ ದಂಡೆ ಮತ್ತು ನೆಗೆವ್ ಮರುಭೂಮಿ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಇಸ್ರೇಲ್ ಸೇನೆಯ ಗುಂಡೇಟಿನಿಂದ ಯುವಕನ ಸಹಿತ ಮೂವರು ಫೆಲೆಸ್ತೀನ್ ಪ್ರಜೆಗಳು ಹತರಾಗಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ ಇಸ್ರೇಲ್ ಸೇನೆ ನಬ್ಲೂಸ್ ಪ್ರಾಂತದ ಉತ್ತರದ ನಗರ ಬಲಾಟದಲ್ಲಿರುವ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ದಾಳಿ ಸಂದರ್ಭ 17 ವರ್ಷದ ನದೆರ್ ರಯಾನ್ ಎಂಬ ಯುವಕನ ತಲೆ, ಎದೆ ಮತ್ತು ಕೈಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಈ ಘಟನೆಯಲ್ಲಿ ಇತರ ಮೂವರಿಗೆ ಗಾಯವಾಗಿದೆ ಎಂದು ಪೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ. ಇಸ್ರೇಲ್ ಸೇನೆ ಹುಡುಕುತ್ತಿದ್ದ ಫೆಲೆಸ್ತೀನ್ ಅಪರಾಧಿ ಅಮರ್ ಅರಾಫತ್ ನಿರಾಶ್ರಿತರ ಶಿಬಿರದಲ್ಲಿರುವ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ದಾಳಿ ನಡೆಸಿದ್ದು ಆತನನನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಅರಾಫತ್ ಬಂಧನದ ಸುದ್ಧಿ ಪ್ರಸಾರವಾಗುತ್ತಿದ್ದಂತೆಯೇ ಇಸ್ರೇಲ್ ಪಡೆ ಹಾಗೂ ಪೆಲೆಸ್ತೀನಿಯನ್ ಹೋರಾಟಗಾರರ ಮಧ್ಯೆ ಘರ್ಷಣೆ ಭುಗಿಲೆದ್ದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ಘಟನೆಯಲ್ಲಿ, ಜೆರುಸಲೇಮ್ನ ಉತ್ತರದಲ್ಲಿರುವ ಖಲಾಂಡಿಯ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಪಡೆ ನಡೆಸಿದ ದಾಳಿಯಲ್ಲಿ ಅಲಾ ಶಹಾಮ್ ಎಂಬ ಯುವಕ ಮೃತಪಟ್ಟಿದ್ದು ಇತರ 6 ಮಂದಿ ಗಾಯಗೊಂಡಿದ್ದಾರೆ. ಶಹಾಮ್ನ ತಲೆಭಾಗಕ್ಕೆ ಗುಂಡು ಹೊಕ್ಕಿದೆ ಎಂದು ವರದಿಯಾಗಿದೆ.
ಮೂರನೇ ಪ್ರಕರಣದಲ್ಲಿ, ನೆಗೆವ್ ಮರುಭೂಮಿಯ ರಹಾತ್ ನಗರದಲ್ಲಿ, ಇಸ್ರೇಲ್ ನ ರಹಸ್ಯ ಪೊಲೀಸ್ ತುಕಡಿಯ ಗುಂಡೇಟಿನಲ್ಲಿ ಸನಾದ್ ಸಲೀಂ ಅಲ್ಹರ್ಬೆದ್ ಎಂಬ ಪೆಲೆಸ್ತೀನ್ ಪ್ರಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ. ಇಬ್ಬರು ಶಂಕಿತ ಕ್ರಿಮಿನಲ್ಗಳನ್ನು ಬಂಧಿಸುವ ಉದ್ದೇಶದಿಂದ ನಗರಕ್ಕೆ ತೆರಳಿದ್ದ ಪೊಲೀಸರ ಮೇಲೆ ಪೆಲೆಸ್ತೀನ್ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತ ಮೃತಪಟ್ಟಿದ್ದಾನೆ. ಮೃತಪಟ್ಟ ವ್ಯಕ್ತಿಯ ಬಳಿಯಿದ್ದ ಪಿಸ್ತೂಲ್ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಸ್ರೇಲ್ ಹೇಳಿದೆ.
ಮಂಗಳವಾರ ನಡೆದ ಹತ್ಯೆ ಪ್ರಕರಣಗಳನ್ನು ಪೆಲೆಸ್ತೀನ್ನ ರಾಜಕೀಯ ಪಕ್ಷಗಳು ಖಂಡಿಸಿವೆ. ಯೆಹೂದಿ ಶತ್ರುವನ್ನು ವಿರೋಧಿಸಲು ಸಮಗ್ರ ಪ್ರತಿರೋಧವು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಪೆಲೆಸ್ತೀನ್ ಶಿಬಿರ, ಗ್ರಾಮ ಮತ್ತು ನಗರಗಳಲ್ಲಿ ನಮ್ಮ ಜನತೆ ಇಸ್ರೇಲ್ನ ಆಕ್ರಮಣ ಪಡೆಗಳನ್ನು ಹಿಮ್ಮೆಟ್ಟಿಸಲು ನಡೆಸುತ್ತಿರುವ ಹೋರಾಟವು ಇನ್ನಷ್ಟು ಪರಿಣಾಮಕಾರಿ ರೀತಿಯಲ್ಲಿ ಸಂಘಟಿತವಾಗುವ ಕರೆಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಷನ್ ಆಫ್ ಪೆಲೆಸ್ತೀನ್ ಹೇಳಿದೆ. ಹುತಾತ್ಮರ ರಕ್ತವು ಯೆಹೂದಿ ಆಕ್ರಮಣಕಾರರ ವಿರುದ್ಧದ ನಮ್ಮ ಹೋರಾಟಕ್ಕೆ ಬಲ ತುಂಬಲಿದೆ ಎಂದು ಹಮಾಸ್ನ ವಕ್ತಾರ ಅಬ್ದುಲತೀಫ್ ಅಲ್ಖನಾವು ಹೇಳಿದ್ದಾರೆ.
ಇಸ್ರೇಲ್ ಸರಕಾರದ ವೆಬ್ಸೈಟ್ ಮೇಲೆ ಸೈಬರ್ ದಾಳಿ
ಇಸ್ರೇಲ್ ಸರಕಾರದ ವೆಬ್ಸೈಟ್ ಅನ್ನು ಗುರಿಯಾಗಿಸಿ ಸೋಮವಾರ ಸೈಬರ್ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಂತರಿಕ ಸಚಿವಾಲಯ, ರಕ್ಷಣಾ ಇಲಾಖೆ ಹಾಗೂ ಇತರ ಕೆಲವು ಇಲಾಖೆ ಮತ್ತು ವಿಭಾಗಗಳ ವೆಬ್ಸೈಟ್ ಮೇಲೆ ಸೈಬರ್ ದಾಳಿ ನಡೆದಿದೆ. ಪರಿಣಾಮ ಕೆಲವು ಗಂಟೆಗಳ ಕಾಲ ವೆಬ್ಸೈಟ್ಗಳು ಕಾರ್ಯನಿರ್ವಹಿಸಲಿಲ್ಲ ಮತ್ತು ವೆಬ್ಸೈಟ್ ಪುಟಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ಬಳಿಕ ಅದನ್ನು ಸರಿಪಡಿಸಲಾಗಿದ್ದು ವೆಬ್ಸೈಟ್ಗಳು ಮತ್ತೆ ಸಕ್ರಿಯಗೊಂಡಿವೆ ಎಂದು ಇಸ್ರೇಲ್ ನ ರಾಷ್ಟ್ರೀಯ ಸೈಬರ್ ನಿರ್ದೇಶನಾಲಯ ಹೇಳಿದೆ.
ದೇಶದ ವಿರುದ್ಧದ ಇದುವರೆಗಿನ ಅತ್ಯಂತ ಬ್ರಹತ್ ಸೈಬರ್ ದಾಳಿ ಇದಾಗಿದೆ ಎಂದು ಇಸ್ರೇಲ್ ನ ಮಾಧ್ಯಮಗಳು ವರದಿ ಮಾಡಿವೆ. ಸರಕಾರದ ವೆಬ್ಸೈಟ್ಗಳು ಗುರಿಯಾಗಿಸಿ ನಡೆದ ವ್ಯಾಪಕ ಸೈಬರ್ ದಾಳಿಯ ಹಿನ್ನೆಲೆಯಲ್ಲಿ ತುರ್ತು ಸೇವಾ ಘಟಕದ ನೆರವಿನೊಂದಿಗೆ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಗಿದೆ ಎಂದು ಇಸ್ರೇಲ್ ನ ಮಾಹಿತಿ ಇಲಾಖೆ ಹೇಳಿದೆ.
ಸೈಬರ್ ದಾಳಿ ನಡೆಸಿದವರ ಬಗ್ಗೆ ತಕ್ಷಣದ ಮಾಹಿತಿ ಲಭಿಸಿಲ್ಲ. ಈ ಹಿಂದೆ ಇಸ್ರೇಲ್ ವೆಬ್ ಸೈಟ್ನ ಮೇಲೆ ನಡೆದಿದ್ದ ಸೈಬರ್ ದಾಳಿ ಇರಾನ್ ಜತೆಗೆ ಸಂಪರ್ಕ ಹೊಂದಿದವರಿಂದ ನಡೆದಿತ್ತು ಎಂದು ಇಸ್ರೇಲ್ ಆರೋಪಿಸಿತ್ತು. ಇರಾನ್ ಮತ್ತು ಇಸ್ರೇಲ್ ಮಧ್ಯೆ ಛಾಯಾ ಸಮರ ನಡೆಯುತ್ತಿದೆ.







