ಬೆಂಗಳೂರಿನ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿಗೆ 15 ದಿನ ಗಡುವು ನೀಡಿದ ಹೈಕೋರ್ಟ್

ಸಾಂದರ್ಭಿಕ ಚಿತ್ರ
ಬೆಂಗಳೂರು ಮಾ.15. ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಕೇಂದ್ರ ಭಾಗ(ಸಿಬಿಡಿ)ದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ದುರಸ್ತಿ ಮಾಡಲು ಹೈಕೋರ್ಟ್ ಮತ್ತೆ ಬಿಬಿಎಂಪಿಗೆ 15 ದಿನಗಳ ಗಡುವು ನೀಡಿದೆ. ಅಲ್ಲದೆ, ಆಧುನಿಕ ತಂತ್ರಜ್ಞಾನ ಬಳಸಿ ಸಮರೋಪಾದಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿಯನ್ನು ಕೈಗೊಳ್ಳಬೇಕು, ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಆದೇಶಿಸಿದೆ.
ನಗರದಲ್ಲಿನ ರಸ್ತೆ ಗುಂಡಿಗಳಿಂದ ಸಾರ್ವಜನಿಕರು ಸಾವು ನೋವುಗಳಿಗೆ ಈಡಾಗುತ್ತಿದ್ದಾರೆ ಎಂದು ಆಕ್ಷೇಪಿಸಿ ಕೋರಮಂಗಲದ ವಿಜಯನ್ ಮೆನನ್ ಸೇರಿ ನಾಲ್ವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ.
ಕಳೆದ ವಿಚಾರಣೆ ವೇಳೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ರಸ್ತೆಗುಂಡಿ ಸಮಸ್ಯೆಗೆ ಪರಿಹಾರಕ್ಕೆ ಪೈಥಾನ್ ಯಂತ್ರ ಬಳಕೆ ಕುರಿತು ಬಿಬಿಎಂಪಿ ನ್ಯಾಯಾಲಯಕ್ಕೆ ಕ್ರಿಯಾ ಯೋಜನೆಯ ವರದಿಯನ್ನು ಸಲ್ಲಿಸಿತ್ತು.
ಆ ವರದಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಶೇಷವಾಗಿ ನಗರದ ಕೇಂದ್ರ ಭಾಗದಲ್ಲಿ(ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್) ಪೈಥಾನ್ ಸೇರಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ವಿವರಿಸಿದರು.
ಅದನ್ನು ಪರಿಶೀಲಿಸಿದ ನ್ಯಾಯಪೀಠ ಮತ್ತೆ ಇಂಜಿನಿಯರ್ ಗಳ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಇನ್ನು ನ್ಯಾಯಾಲಯ ವಿಳಂಬವನ್ನು ಸಹಿಸುವುದಿಲ್ಲ, ಗುಂಡಿ ಮುಚ್ಚುವ ಕಾರ್ಯವನ್ನು ಸಮರೋಪಾದಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೈಗೊಳ್ಳಬೇಕು. ಹದಿನೈದು ದಿನಗಳಲ್ಲಿ ಸಿಬಿಡಿ ಪ್ರದೇಶದಲ್ಲಿ ಯಾವೊಂದು ಗುಂಡಿಯೂ ಇರದಂತೆ ನೋಡಿಕೊಳ್ಳಬೇಕು, ಆ ಕುರಿತು ಕಾಮಗಾರಿಯ ವಿವರಗಳನ್ನು ಒಳಗೊಂಡ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.
ಈ ಮಧ್ಯೆ, ಬೆಂಗಳೂರು ನಗರದಲ್ಲಿ ಸೋಮವಾರ ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಗೆ ಬಿದ್ದು ಸಾವನ್ನಪ್ಪಿದ ಅಶ್ವಿನ್ ವಿಚಾರವೂ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಪ್ರಸ್ತಾಪಿಸಲ್ಪಟ್ಟಿತ್ತು.
ವಕೀಲರು ವಿಚಾರ ಪ್ರಸ್ತಾಪಿಸಿದ್ದಕ್ಕೆ ಸಿಜೆ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಬೆಂಗಳೂರು ನಗರದ ಕೆಟ್ಟ ರಸ್ತೆಗಳಿಂದಾಗಿ ಯಾರಾದರೂ ಸಾವನ್ನಪ್ಪಿದರು ಎಂಬ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಓದಿದಾಗ ನಮಗೆ ನಿಜಕ್ಕೂ 'ತಪ್ಪಿತಸ್ಥ' ಭಾವನೆ ಮೂಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯಾಲಯಗಳ ಸರಣಿ ನಿರ್ದೇಶನಗಳ ಹೊರತಾಗಿಯೂ ಪರಿಸ್ಥಿತಿ ಸುಧಾರಿಸುತ್ತಿಲ್ಲ, ಇದು ನಿಜಕ್ಕೂ ನೋವಿನ ಸಂಗತಿ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.







