ಬಳಕೆದಾರರಿಗೆ ಹಕ್ಕಿನ ಅರಿವಾದರೆ ಜಾಗೃತಿ ಸಾಧ್ಯ: ನ್ಯಾ.ಶರ್ಮಿಳಾ ಎಸ್

ಉಡುಪಿ : ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆಯುವಾಗ ತಮಗಾಗುವ ಶೋಷಣೆಯನ್ನು ಪ್ರಶ್ನಿಸಲು, ಗ್ರಾಹಕರ ಹಿತರಕ್ಷಣೆಗೆ ಇರುವ ಕಾನೂನುಗಳನ್ನು ತಿಳಿದುಕೊಂಡಾಗ ಮಾತ್ರ ಸಾಧ್ಯ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಹೇಳಿದ್ದಾರೆ.
ಮಂಗಳವಾರ ನಗರದ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಬಳಕೆದಾರರ ವೇದಿಕೆ, ಜಿಲ್ಲಾ ಮಾಹಿತಿ ಕೇಂದ್ರ, ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರಕಾರ ಗ್ರಾಹಕರ ಹಿತರಕ್ಷಣೆಗಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಗ್ರಾಹಕರು ಅರಿವು ಹೊಂದಿದಾಗ ತಮಗಾದ ಅನ್ಯಾಯದ ಬಗ್ಗೆ ಪ್ರಶ್ನಿಸಲು ಸಾಧ್ಯವಾಗುತ್ತದೆ ಎಂದವರು ಅಭಿಪ್ರಾಯ ಪಟ್ಟರು.
ಪ್ರಥಮವಾಗಿ ೧೯೬೨ರ ಮಾರ್ಚ್ ೧೫ರಂದು ಅಮೆರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಗ್ರಾಹಕರ ರಕ್ಷಣೆಗಾಗಿ ಕಾನೂನುಗಳನ್ನು ಜಾರಿಗೆ ತಂದರು. ಹೀಗಾಗಿ ಈ ದಿನವನ್ನು ವಿಶ್ವ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಭಾರತದಲ್ಲಿ ೧೯೮೬ರಲ್ಲಿ ಗ್ರಾಹಕರ ರಕ್ಷಣೆಗಾಗಿ ಕಾಯ್ದೆಯನ್ನು ರೂಪಿಸಲಾಯಿತು. ಮುಂದಿನ ದಿನಗಳಲ್ಲಿ ಅಗತ್ಯಕ್ಕನುಗುಣವಾಗಿ ಕೆಲವು ತಿದ್ದುಪಡಿಗಳನ್ನು ಸಹ ಮಾಡಲಾಗಿದೆ ಎಂದರು.
ಕಾರ್ಮಿಕ ಅಧಿಕಾರಿ ಕುಮಾರ್ ಮಾತನಾಡಿ, ಸರಕುಗಳು ಹಾಗೂ ಸೇವೆ ಗಳನ್ನು ಒದಗಿಸುವ ಸಂಸ್ಥೆಗಳು ಗ್ರಾಹಕ ಹಿತರಕ್ಷಣಾ ಕಾನೂನುಗಳನ್ನು ಸರಿಯಾಗಿ ಪಾಲನೆ ಮಾಡುವ ಜೊತೆಗೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು.ಸರಕು ಹಾಗೂ ಸೇವೆಗಳನ್ನು ಪಡೆಯುವ ಗ್ರಾಹಕ ತನಗಾದ ಶೋಷಣೆಯ ಬಗ್ಗೆ ಪ್ರಶ್ನಿಸುವ ಬದಲು ತನಗೆ ಅನ್ಯಾಯವಾಗದಂತೆ ಜಾಗೃತಿ ವಹಿಸಬೇಕು. ಒಂದೊಮ್ಮೆ ಇದನ್ನು ಮೀರಿ ತೊಂದರೆಗೊಳಗಾದಲ್ಲಿ ಕಾನೂನಿನ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕ ಎ.ಪಿ ಕೊಡಂಚ ಮಾತನಾಡಿ, ವ್ಯಾಪಾರಸ್ಥರು ತಮಗೆ ಹೆಚ್ಚು ಲಾಭ ಬರಬೇಕೆಂಬ ಉದ್ದೇಶದಿಂದ ಮೋಸ ಮಾಡಲು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ನ್ಯಾಯ ಕೊಡಿಸಲು ಗ್ರಾಹಕರ ಕಾನೂನು ಜಾರಿಗೆ ಬಂದಿದೆ. ಆಧುನಿಕ ಯುಗದಲ್ಲಿ ಗ್ರಾಹಕನು ಡಿಜಿಟಲ್ ವ್ಯವಹಾರಗಳನ್ನು ನಡೆಸುವಾಗ ಜಾಗೃತಿ ವಹಿಸುವುದು ಅವಶ್ಯ ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನಿಲ್ ಟಿ ಮಾಸಾರೆಡ್ಡಿ, ಆಯೋಗದ ಸದಸ್ಯರಾದ ಪ್ರೇಮಾ ಹಾಗೂ ಸುಜಾತ ಬಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಹಮದ್ ಇಸಾಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಾದಿರಾಜ ಆಚಾರ್ಯ ವಂದಿಸಿದರೆ, ಲಕ್ಷ್ಮೀಬಾಯಿ ನಿರೂಪಿಸಿದರು.








