ಸುಪ್ರೀಂ ಕೋರ್ಟ್ ಮುಂದೆ ಹಿಜಾಬ್ ಪ್ರಕರಣವನ್ನು ಉಲ್ಲೇಖಿಸಿದ ವಕೀಲರು

ಹೊಸದಿಲ್ಲಿ, ಮಾ.16: ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾಗೊಳಿಸಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ತುರ್ತು ವಿಚಾರಣೆಯನ್ನು ನಡೆಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿದೆ. ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮದಲ್ಲಿ ಅಗತ್ಯ ಧಾರ್ಮಿಕ ಆಚರಣೆಗಳ ಭಾಗವಲ್ಲ ಎಂದು ಉಚ್ಚ ನ್ಯಾಯಾಲಯವು ಸೋಮವಾರ ತನ್ನ ತೀರ್ಪಿನಲ್ಲಿ ಎತ್ತಿ ಹಿಡಿದಿತ್ತು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು ಅರ್ಜಿಯನ್ನು ಉಲ್ಲೇಖಿಸಿದ ಅರ್ಜಿದಾರರ ಪರ ಹಿರಿಯ ವಕೀಲ ಸಂಜಯ ಹೆಗ್ಡೆ ಅವರು,ಹಲವಾರು ವಿದ್ಯಾರ್ಥಿನಿಯರು ಪರೀಕ್ಷೆಗಳಿಗೆ ಹಾಜರಾಗಬೇಕಿದೆ,ಹೀಗಾಗಿ ಈ ವಿಷಯದ ತುರ್ತು ವಿಚಾರಣೆ ಅಗತ್ಯವಿದೆ ಎಂದು ಹೇಳಿದರು. ಇತರರೂ ಉಲ್ಲೇಖಗಳನ್ನು ಸಲ್ಲಿಸಿದ್ದಾರೆ ಮತ್ತು ನ್ಯಾಯಾಲಯವು ವಿಷಯವನ್ನು ಪರಿಶೀಲಿಸಲಿದೆ ಎಂದು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಹಿಮಾ ಕೊಹ್ಲಿ ಅವರನ್ನೂ ಒಳಗೊಂಡ ಪೀಠವು ತಿಳಿಸಿತು.
ಪರೀಕ್ಷೆಗಳು ಆರಂಭವಾಗುತ್ತಿವೆ ಮತ್ತು ವಿಷಯವು ತುರ್ತಾಗಿದೆ ಎಂದು ಹೆಗ್ಡೆ ಒತ್ತಾಯಿಸಿದಾಗ ಪೀಠವು,ತನಗೆ ಕಾಲಾವಕಾಶದ ಅಗತ್ಯವಿದೆ. ನ್ಯಾಯಾಲಯವು ಹೋಳಿಯ ಬಳಿಕ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು ಎಂದು ತಿಳಿಸಿತು.
ವಕೀಲರಾದ ಆದಿಲ್ ಅಹ್ಮದ್ ಮತ್ತು ರಹಮತುಲ್ಲಾ ಕೊತ್ವಾಲ್ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಉಚ್ಚ ನ್ಯಾಯಾಲಯದ ಆದೇಶವು ಮುಸ್ಲಿಮೇತರ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ಅಸಮಂಜಸವಾದ ವರ್ಗೀಕರಣವನ್ನು ಸೃಷ್ಟಿಸುತ್ತದೆ ಮತ್ತು ತನ್ಮೂಲಕ ಭಾರತೀಯ ಸಂವಿಧಾನದ ಮೂಲ ಸ್ವರೂಪವಾಗಿರುವ ಜಾತ್ಯತೀತತೆಯ ಪರಿಕಲ್ಪನೆಯ ನೇರ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಮುಹಮ್ಮದ್ ಆರಿಫ್ ಜಮೀಲ್ ಮತ್ತು ಇತರರು ಅರ್ಜಿದಾರರಾಗಿದ್ದಾರೆ.
ಆಕ್ಷೇಪಾರ್ಹ ಆದೇಶವು ಭಾರತೀಯ ಸಂವಿಧಾನದ 14,15,19,21 ಮತ್ತು 25ನೇ ವಿಧಿಗಳ ಸಂಪೂರ್ಣ ಉಲ್ಲಂಘನೆಯೂ ಆಗಿದೆ ಮತ್ತು ಭಾರತವು ಸಹಿ ಹಾಕಿರುವ ಅಂತರರಾಷ್ಟ್ರೀಯ ನಿರ್ಣಯಗಳ ಮುಖ್ಯ ತತ್ವಗಳನ್ನೂ ಉಲ್ಲಂಘಿಸಿದೆ ಎಂದು ಪ್ರತಿಪಾದಿಸಿರುವ ಅರ್ಜಿಯಲ್ಲಿ ಸಂವಿಧಾನವನ್ನು ಉಲ್ಲಂಘಿಸಿರುವ ಆಕ್ಷೇಪಾರ್ಹ ಸರಕಾರಿ ಆದೇಶದಿಂದಾಗಿ ನೊಂದ ಅರ್ಜಿದಾರರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಸರಕಾರದ ಆಕ್ಷೇಪಾರ್ಹ ಆದೇಶವನ್ನು ಎತ್ತಿ ಹಿಡಿಯುವ ಮೂಲಕ ಉಚ್ಚ ನ್ಯಾಯಾಲಯವು ಮುಸ್ಲಿಂ ವಿದ್ಯಾರ್ಥಿನಿಯರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಬಯಸಿದೆ. ಹಿಜಾಬ್ ಧರಿಸುವ ಹಕ್ಕು ಅಗತ್ಯ ಧಾರ್ಮಿಕ ಆಚರಣೆಯಾಗಿದೆ ಮತ್ತು ವಿಧಿ 19(1)(ಎ) ಮೂಲಕ ಖಚಿತ ಪಡಿಸಿರುವ ಅಭಿವ್ಯಕ್ತಿ ಹಕ್ಕು,ಖಾಸಗಿತನದ ಹಕ್ಕು ಮತ್ತು 25ನೇ ವಿಧಿಯಡಿ ಆತ್ಮಸಾಕ್ಷಿಯ ಸ್ವಾತಂತ್ರದ ವ್ಯಾಪ್ತಿಯಲ್ಲಿ ಒಳಗೊಂಡಿದೆ. ಮಾನ್ಯತೆ ಹೊಂದಿರುವ ಕಾನೂನು ಇಲ್ಲದೆ ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಮನನ್ ಮತ್ತು ನಿಬಾ ನಾಝ್ ಸಲ್ಲಿಸಿರುವ ಇನ್ನೊಂದು ಅರ್ಜಿಯಲ್ಲಿ, ಧರ್ಮವನ್ನು ಪಾಲಿಸುವವರು ಆತ್ಮಸಾಕ್ಷಿಯ ಹಕ್ಕನ್ನು ಹೊಂದಿರಲು ಸಾಧ್ಯವಿಲ್ಲ ಎಂದು ನಿರ್ಧರಿಸುವ ಮೂಲಕ ಧಾರ್ಮಿಕ ಸ್ವಾತಂತ್ರ ಮತ್ತು ಆತ್ಮಸಾಕ್ಷಿಯ ವಿಭಜನೆಯನ್ನು ಸೃಷ್ಟಿಸುವಲ್ಲಿ ಉಚ್ಚ ನ್ಯಾಯಾಲಯವು ತಪ್ಪು ಮಾಡಿದೆ ಎಂದು ಅರ್ಜಿದಾರರು ಅತ್ಯಂತ ನಮ್ರವಾಗಿ ನಿವೇದಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ,1983 ಮತ್ತು ಅದರಡಿಯ ನಿಯಮಗಳು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿಲ್ಲ ಎನ್ನುವುದನ್ನು ಗಮನಿಸಲು ಉಚ್ಚ ನ್ಯಾಯಾಲಯವು ವಿಫಲಗೊಂಡಿದೆ ಎಂದು ಅರ್ಜಿಯು ವಾದಿಸಿದೆ.







