ಸ್ವಾತಂತ್ರ್ಯೋತ್ತರ ಭಾರತದ ಕರಾಳ ಚರಿತ್ರೆಯನ್ನು ತೆರೆದಿಡುವ ‘ಚಿಮ್ಮಿದ ರಕ್ತ’
‘‘ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು’’

ಇದು ಬಾಬಾ ಸಾಹೇಬ್ ಅಂಬೇಡ್ಕರರ ಪ್ರಸಿದ್ಧ ಮಾತುಗಳಲ್ಲೊಂದು. ಆ ಮಾತು ಅಕ್ಷರಶ ನಿಜವೂ ಹೌದು. ಇತಿಹಾಸ ಮರೆತವರು ಯಾವುದೇ ಏಳಿಗೆ ಕಾಣಲಾರರು. ನೊಂದವರ ಸಬಲೀಕರಣಕ್ಕಾಗಿ ಚರಿತ್ರೆಯನ್ನು ಸದಾ ಜೀವಂತವಾಗಿ ಇಡಲೇಬೇಕು.
ದಲಿತ ಮತ್ತು ಮುಸ್ಲಿಮ್ ಸಮುದಾಯಗಳು ಜನಸಂಖ್ಯೆಯಲ್ಲಿ ಈ ದೇಶದ ಎರಡು ಬಲಾಢ್ಯ ಸಮುದಾಯಗಳು. ಒಗ್ಗಟ್ಟಾದರೆ ಸ್ವಂತ ಪಕ್ಷ ಕಟ್ಟಿ ಅಧಿಕಾರ ಹಿಡಿಯಬಲ್ಲ ಸಾಮರ್ಥ್ಯವುಳ್ಳ ಸಮುದಾಯಗಳು. ಆದರೆ ಒಗ್ಗಟ್ಟಿಲ್ಲದ ಕಾರಣ ಕಳೆದ 70 ವರ್ಷಗಳಿಂದಲೂ ಈ ಎರಡು ಸಮುದಾಯಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಲೇ ಇದೆ. ಅದೂ ವೈಯಕ್ತಿಕವಾಗಿ ಎಸಗಿದಂತಹ ದೌರ್ಜನ್ಯಗಳಲ್ಲ. ಗುಂಪುಗೂಡಿ, ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡು, ಪಿತೂರಿಯ ಭಾಗವಾಗಿ ನಡೆಸಿದ ಬರ್ಬರ ಹತ್ಯಾಕಾಂಡಗಳು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದಲಿತ ಮತ್ತು ಮುಸ್ಲಿಮರ ಮೇಲೆ ನಡೆದ ಹತ್ಯಾಕಾಂಡಗಳನ್ನು ಉಮರ್ ಫಾರೂಕ್‌ರವರ ‘ಚಿಮ್ಮಿದ ರಕ್ತ’ ಪುಸ್ತಕ ಅಕ್ಷರ ರೂಪದಲ್ಲಿ ರೂಪುಗೊಂಡು ಚರಿತ್ರೆಯನ್ನು ನೆನಪಿಸುವ ಘನ ಕೆಲಸವನ್ನು ಮಾಡುತ್ತದೆ.
ಲೇಖಕರ ಎರಡು ವರ್ಷಗಳ ಸತತ ಅಧ್ಯಯನದಿಂದ ಜನ್ಮ ತಾಳಿದ ಈ ‘ಚಿಮ್ಮಿದ ರಕ್ತ’ ಕೃತಿ, ಸ್ವಾತಂತ್ರ್ಯೋತ್ತರ ಭಾರತದ ಕರಾಳ ಚರಿತ್ರೆಯನ್ನು ಎಳೆಎಳೆಯಾಗಿ ನಮ್ಮ ಮುಂದಿಡುತ್ತದೆ.
ಒಂದು ವರ್ಷವಲ್ಲ, ಎರಡು ಶತಮಾನಗಳಲ್ಲಿ ಸಹಸ್ರಾರು ವರ್ಷಗಳಿಂದಲೂ ಮನುಷ್ಯತ್ವ ಮಾರಿಕೊಂಡಿದ್ದ ಪರಕೀಯ ವೈದಿಕರು, ದಲಿತರ ಮೇಲೆ ತೀವ್ರ ದೌರ್ಜನ್ಯಗಳನ್ನು ನಡೆಸಿದ್ದಾರೆ. ದೇವರು-ಧರ್ಮದ ಹೆಸರಿನಲ್ಲಿ ಅನಿಷ್ಟ ಪದ್ಧತಿಗಳನ್ನು ಹೇರಿದ್ದಾರೆ. ಅಸ್ಪೃಶ್ಯರೆಂದು ಊರಿನಿಂದ ಹೊರಗೆ ಇಟ್ಟಿದ್ದಾರೆ.
ಬಾಬಾ ಸಾಹೇಬರ ಶ್ರಮ, ಸಾಧನೆಯಿಂದ ಈ ದೇಶಕ್ಕೊಂದು ಸಂವಿಧಾನವೆಂಬ ಮಹಾಗ್ರಂಥ ರಚನೆಯಾಯಿತು. ತನ್ಮೂಲಕ ಈ ದೇಶದ ಶೋಷಿತರ ವಿಮೋಚನೆಯಾಗತೊಡಗಿತು. ಆದರೆ ಆ ಸಂವಿಧಾನವನ್ನು ಜಾರಿಗೊಳಿಸಬೇಕಾದ ಜಾಗದಲ್ಲಿ ಮತ್ತದೇ ಪರಕೀಯ ವೈದಿಕರು ಬಂದು ಕುಳಿತರು. ದಲಿತರ ಮೇಲಿನ ಹಿಂಸೆ ಮತ್ತಷ್ಟು ಹೆಚ್ಚಾಯಿತು. ಒಂದಲ್ಲ ಒಂದು ರೂಪದಲ್ಲಿ ಬಂದು ಎರಗತೊಡಗಿತು.
ಹಿಂದೂ ನಾವೆಲ್ಲ ಒಂದು ಎನ್ನುತ್ತಲೇ, ಕರಂಚೇಡು, ಖೈರ್ಲಾಂಜಿ, ಕಂಬಾಲಪಲ್ಲಿ, ಚಂಡೂರು, ಕಿಲ್ವೆನ್ಮನಿ, ಲಕ್ಷ್ಮಣಪುರ ಬಾತೆ, ಬತಾನಿ ತೋಲಾ, ರಮಾಬಾಯಿ ಕಾಲನಿಯಲ್ಲಿ ದಲಿತರ ಹುಟ್ಟಡಗಿಸಿ ಹೊಸಕಿ ಹಾಕಿದ್ದಾರೆ ಈ ಸವರ್ಣೀಯರು. ಇಲ್ಲೆಲ್ಲಾ ತಾಂಡವವಾಡಿರುವ ಹಿಂಸೆ ಎದೆ ನಡುಗಿಸುತ್ತದೆ. ಮಕ್ಕಳು, ಮಹಿಳೆಯರ ಮೇಲಾದ ಅತ್ಯಾಚಾರದಂತಹ ಅಮಾನುಷ ಕೃತ್ಯಗಳು ಉಸಿರುಗಟ್ಟಿಸುತ್ತವೆ.
‘ಚಿಮ್ಮಿದ ರಕ್ತ’ ಪುಸ್ತಕದಲ್ಲಿ ಕಣ್ಣಿಗೆ ರಾಚುವಂತೆ ವಿವರಿಸಿರುವ ಬರ್ಬರ ಘಟನಾವಳಿಗಳು ಕಣ್ಮುಂದೆ ಹಾದು ಹೋದಂತಾಗಿ ಮೈ ನಡುಗಿಸುತ್ತವೆ. ಹೃದಯ ಕುಸಿದು ಕಂಪಿಸುತ್ತದೆ. ಅಮಾಯಕರ ರಕ್ತ ಹೀರಿದ ಆ ಚಾಕು, ಚೂರಿ, ಭರ್ಚಿ, ತಲವಾರುಗಳನ್ನು ನೆನೆಸಿಕೊಂಡಾಗ ಎದೆ ಝಲ್ಲೆನ್ನುತ್ತದೆ. ಮಕ್ಕಳು ಮಹಿಳೆಯರ ಆರ್ತನಾದ, ಆಕ್ರಂದನ ಊಹಿಸಿಕೊಂಡಾಗ ಜಂಘಾಬಲವೇ ಉಡುಗಿಹೋಗುತ್ತದೆ.
ಮುಸ್ಲಿಮರ ಹತ್ಯಾಕಾಂಡಗಳ ಕುರಿತಾಗಿ ಉಮರ್ ಫಾರೂಕ್ ಬರೆದಿರುವ ‘‘ಗರ್ಭಿಣಿಯರಂತೂ ಓದಲೇಬೇಡಿ. ಪುಸ್ತಕ ಮಡಚಿ ಪಕ್ಕಕ್ಕಿಡಿ!’’ ಎನ್ನುವ ಸಾಲುಗಳಂತೂ ಪದೇಪದೇ ನಮ್ಮ ಮನ ಕಲಕುತ್ತವೆ. ಏಕೆಂದರೆ ಮುಂದೆ ವಿವರಿಸಿರುವ ಘಟನೆಗಳನ್ನು ಓದುವಾಗ ಕಣ್ಣಂಚಲ್ಲಿರುವ ಕಣ್ಣೀರು ನಮಗರಿವಿಲ್ಲದಂತೆ ಕೆನ್ನೆಗಿಳಿಯುತ್ತದೆ. ಹೇಳಲಾಗದ ಸಂಕಟ ಒಳಗಳನ್ನೆಲ್ಲ ತೊಳಸತೊಡುಗುತ್ತದೆ.
ಗುಜರಾತ್, ನೆಲ್ಲಿ, ಹಾಶಿಂಪುರ, ಭಾಗಲ್ಪುರ, ಮೊರಾದಾಬಾದ್, ಮುಝಪ್ಫರ್ ನಗರ, ಮುಂಬೈ ಹಾಗೂ ಬಾಬರಿ ಮಸೀದಿ ಧ್ವಂಸದಿಂದಾಗಿ ದೇಶಾದ್ಯಂತ ನಡೆದ ಅಗಣಿತ ಮುಸ್ಲಿಮರ ಹತ್ಯಾಕಾಂಡಗಳ ಒಂದೊಂದು ಘಟನೆಗಳನ್ನೂ ಓದುವಾಗ ಕಣ್ಮುಂದೆ ನಡೆಯುತ್ತಿದ್ದಾವೇನೋ ಎಂಬಂತೆ ಭಾಸವಾಗುತ್ತದೆ. ಕ್ರೂರ ಕರಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಬೆಂದ ಜೀವಗಳು, ನರಳುವ ಒಡಲುಗಳು, ಧ್ವಂಸಗೊಂಡು ಧೂಳೀಪಟವಾದ ಮಸೀದಿಗಳು, ರಾಶಿ ರಾಶಿ ಹೆಣಗಳು ಕಣ್ಮುಂದೆ ಹಾದು ಹೋಗುವಾಗಲೆಲ್ಲಾ ಎದೆಯೊಳಗೆ ತಲ್ಲಣ, ಆತಂಕಗಳು ಹುಟ್ಟುತ್ತವೆ. ಸಂಭವಿಸಿದ ಅಮಾನುಷ ಕ್ರೌರ್ಯದಿಂದ ನಮ್ಮ ಹೃದಯ ಒಡೆದು ಚೂರಾಗುತ್ತದೆ.
ಸ್ವತಂತ್ರ ಭಾರತದಲ್ಲಿ ದೇಶಾದ್ಯಂತ ದಲಿತ ಮತ್ತು ಮುಸ್ಲಿಮರ ಹತ್ಯಾಕಾಂಡಗಳ ಭೀಕರತೆಯನ್ನು, ಅಮಾನುಷತೆಯನ್ನು ‘ಚಿಮ್ಮಿದ ರಕ್ತ’ ಕೃತಿಯಲ್ಲಿ ಪರಿಣಾಮಕಾರಿಯಾಗಿ, ಮನನೀಯವಾಗಿ ಚಿತ್ರಿಸಿರುವ ಉಮರ್ ಫಾರೂಕ್, ಎಲ್ಲಿಯೂ ಪ್ರಚೋದನಕಾರಿ, ಉದ್ರೇಕಕಾರಿ ಭಾಷೆಯನ್ನು ಬಳಸಿಲ್ಲ. ಚಿಂತನೆಯಲ್ಲಿ ಪಕ್ವತೆ ಹೊಂದಿರುವ ಲೇಖಕರು, ಪುಸ್ತಕದಲ್ಲಿ ದಲಿತ ಮತ್ತು ಮುಸ್ಲಿಮರ ಸ್ಥಿತಿಗತಿಗಳನ್ನು ಸಮಗ್ರವಾಗಿ ಚರ್ಚಿಸಿದ್ದಾರೆ. ಅಲ್ಲದೆ ಎರಡೂ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ತಮ್ಮದೇ ಅಭಿಪ್ರಾಯದಲ್ಲಿ ಪರಿಹಾರವನ್ನೂ ಸೂಚಿಸಿದ್ದಾರೆ.







