ಯಾವುದೇ ಪ್ರಭಾವಕ್ಕೊಳಗಾಗದೇ, ಭಯಪಡದೇ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ ದಿಲ್ಲಿ ಹೈಕೋರ್ಟ್
ರಾಷ್ಟ್ರಗೀತೆ ಹಾಡಲು ಬಲವಂತಪಡಿಸಿ ವ್ಯಕ್ತಿಯ ಕೊಲೆ ಪ್ರಕರಣ

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020ರಲ್ಲಿ ನಡೆದ ಮತೀಯ ಹಿಂಸಾಚಾರದ ವೇಳೆ ಪೊಲೀಸರಿಂದ ಹಲ್ಲೆಗೊಳಗಾಗಿದ್ದೇ ಅಲ್ಲದೆ ರಾಷ್ಟ್ರಗೀತೆಯನ್ನು ಹಾಡುವಂತೆ ಬಲವಂತಕ್ಕೊಳಗಾದ 23 ವರ್ಷದ ಯುವಕ ಫೈಝಾನ್ ಸಾವು ಪ್ರಕರಣದ ತನಿಖೆಯನ್ನು ಯಾವುದೇ ಪ್ರಭಾವಕ್ಕೊಳಗಾಗದೆ ಹಾಗೂ ನಿರ್ಭೀತಿಯಿಂದ ನಡೆಸಬೇಕು ಎಂದು ದಿಲ್ಲಿ ಹೈಕೋರ್ಟ್ ಮಂಗಳವಾರ ದಿಲ್ಲಿ ಪೊಲೀಸರಿಗೆ ಹೇಳಿದೆ.
"ಯಾವುದೇ ಪ್ರಮುಖ ವ್ಯಕ್ತಿ, ಯಾವುದೇ ವಿಐಪಿ ಶಾಮೀಲಾಗಿದ್ದರೂ ನೀವು ಯಾವುದೇ ಪ್ರಭಾವಕ್ಕೊಳಗಾಗದೆ ತನಿಖೆ ಪೂರ್ಣಗೊಳಿಸಬೇಕು" ಎಂದು ಜಸ್ಟಿಸ್ ಚಂದ್ರ ಧಾರಿ ಸಿಂಗ್ ಪೊಲೀಸರಿಗೆ ಸೂಚಿಸಿದ್ದಾರೆ.
ಘಟನೆ ನಡೆದು ಎರಡು ವರ್ಷಗಳಾಗಿದ್ದರೂ ಇನ್ನೂ ಏಕೆ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ಪ್ರತಿಕ್ರಿಯಹಿಸಿದ ಡಿಸಿಪಿ, ಈ ಪ್ರಕರಣದಲ್ಲಿ ಹೆಡ್ ಕಾನ್‍ಸ್ಟೇಬಲ್ ಒಬ್ಬರನ್ನು ವಿಚಾರಣೆ ನಡೆಸಲಾಗಿದೆ ಹಾಗೂ ಘಟನೆ ಸಂಬಂಧ ಸಿಸಿಟಿವಿ ಮತ್ತು ಇತರ ವೀಡಿಯೋಗಳನ್ನು ಪರಿಶೀಲಿಸಲಾಗುತ್ತಿದೆ, ತಾಂತ್ರಿಕ ಸಾಕ್ಷ್ಯವಿದೆ, ಆ ಸಮಯದಲ್ಲಿ ಉಪಸ್ಥಿತನಿದ್ದ ಒಬ್ಬ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ, ಪಾಲಿಗ್ರಾಫಿ ಪರೀಕ್ಷೆ ನಡೆಸಲಾಗಿದೆ ಆದರೆ ಆತ ಥಳಿಸುವುದು ಕಂಡುಬಂದಿರಲಿಲ್ಲ, ಇನ್ನಷ್ಟು ಸಾಕ್ಷ್ಯ ದೊರೆತ ನಂತರ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ತನಿಖೆಯಲ್ಲಿ ಹಲವು ಲೋಪಗಳಿವೆ ಹಾಗೂ ಜ್ಯೋತಿನಗರ ಠಾಣೆಯ ಪೊಲೀಸರು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಫೈಝಾನ್ ಕುಟುಂಬ ಪರ ವಕೀಲೆ ವೃಂದಾ ಗ್ರೋವರ್ ಹೇಳಿದರು.
ಈ ನಿರ್ದಿಷ್ಟ ಘಟನೆ ಫೆಬ್ರವರಿ 24, 2020ರಂದು ನಡೆದಿತ್ತು ಹಾಗೂ ಈ ಕುರಿತ ವೀಡಿಯೋದಲ್ಲಿ ನೆಲದಲ್ಲಿ ಬಿದ್ದಿದ್ದ ಫೈಝಾನ್ ಮತ್ತು ಇತರ ನಾಲ್ಕು ಮಂದಿಗೆ ಪೊಲೀಸರು ಥಳಿಸುತ್ತಿರುವುದು ಹಾಗೂ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಲು ಬಲವಂತಪಡಿಸುತ್ತಿರುವುದು ಕಾಣಿಸುತ್ತದೆ. ನಂತರ ಫೈಝಾನ್‍ನನ್ನು ಜ್ಯೋತಿನಗರ ಠಾಣೆಯಲ್ಲಿರಿಸಿ ಬಿಡುಗಡೆಗೊಳಿಸಲಾಗಿತ್ತು. ಇದಾದ ಎರಡೇ ದಿನಗಳಲ್ಲಿ ಆತ ಮೃತಪಟ್ಟಿದ್ದ.







