ಹಿಜಾಬ್- ಕೇಸರಿ ಶಾಲು ಹೈಕೋರ್ಟ್ ತೀರ್ಪು ಹಿನ್ನಲೆ; ಪೊಲೀಸ್ ಭದ್ರತೆಯೊಂದಿಗೆ ಕಾಲೇಜು ಆರಂಭ
ಮಂಗಳೂರು : ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿ ಸಂಬಂಧ ಸರಕಾರ ಹೊರಡಿಸಿರುವ ಆದೇಶವನ್ನು ಎತ್ತಿ ಹಿಡಿದು ಹಿಜಾಬ್ ಧರಿಸುವುದ್ನು ನಿರ್ಬಂಧಿಸಿ ಹೈಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಇಂದು ದ.ಕ. ಜಿಲ್ಲೆಯಾದ್ಯಾಂತ ಶಾಲಾ ಕಾಲೇಜುಗಳು ಪೊಲೀಸ್ ಕಣ್ಗಾವಲು ಹಾಗೂ ಭದ್ರತೆಯೊಂದಿಗೆ ಆರಂಭಗೊಂಡಿವೆ. ಹಿಜಾಬ್ ನಿಷೇಧದ ಹಿನ್ನೆಲೆಯಲ್ಲಿ ಜಿಲ್ಲೆಯ ಸರಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಇಂದು ತರಗತಿಗಳಿಗೆ ಹಾಜರಾರದು.
ಹಿಜಾಬ್ ವಿವಾದ ಉಂಟಾಗಿ ಕಳೆದ ಸುಮಾರು ಎಂಟು ದಿನಗಳಿಂದ ಬಂದ್ ಆಗಿದ್ದ ನಗರದ ರಥಬೀದಿಯ ದಯಾನದ ಪೈ ಸತೀಶ್ ಪೈ ಸಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸ್ನಾತಕೋತ್ತರ ಪದವಿ (ಪಿಜಿ) ತರಗತಿಗಳು ಆರಂಭಗೊಂಡಿತ್ತು. ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಮೂರು ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದು, ಅವರಲ್ಲಿ ಇಬ್ಬರು ಮಾತ್ರವೇ ಇಂದು ಕಾಲೇಜಿಗೆ ಹಾಜರಾಗಿದ್ದರು. ಈ ಕಾಲೇಜಿನ ಪದವಿ ತರಗತಿಗಳ ಪರೀಕ್ಷೆ ನಡೆಯುತ್ತಿದ್ದು, ಹಿಜಾಬ್ ಪ್ರಕರಣದಿಂದ ಪರೀಕ್ಷೆಗಳು ತಡೆಹಿಡಿಯಲ್ಪಟ್ಟಿದ್ದು, ಇದೀಗ ಮಾ. 17ರಿಂದ ಮತ್ತೆ ಪರೀಕ್ಷೆಗಳು ಆರಂಭವಾಗಲಿವೆ. ಇಂದು ಕಾಲೇಜಿನ ಪ್ರವೇಶ ದ್ವಾರದಲ್ಲಿ ಪೊಲೀಸ್ ಗಸ್ತು ವಾಹನದ ಜತೆ ಪೊಲೀಸ್ ಸಿಬ್ಬಂದಿ ಕಾವಲಿನೊಂದಿಗೆ ತರಗತಿಗಳನ್ನು ನಡೆಸಲಾಯಿತು.
ಪದವಿ ತರಗತಿಯಲ್ಲಿ 2382 ವಿದ್ಯಾರ್ಥಿಗಳಿದ್ದು, ಅವರಲ್ಲಿ 33 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಹೈಕೋರ್ಟ್ ಆದೇಶದಂತೆ ವಸ್ತ್ರ ಸಂಹಿತೆಯನ್ನು ಪಾಲಿಸಿ ಎಲ್ಲಾ ವಿದ್ಯಾರ್ಥಿಗಳು ತರಗತಿ, ಪರೀಕ್ಷೆಗೆ ಹಾಜರಾಗಬೇಕಾಗಿದೆ. ಬುರ್ಖಾ ಅಥವಾ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿನಿಯರಿಗೆ ಶಾಲೆಯ ಆವರಣಕ್ಕೆ ಬಂದ ಬಳಿಕ ಅದನ್ನು ತೆಗೆದು ತರಗತಿ ಪ್ರವೇಶಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಒಟ್ಟು 2582 ವಿದ್ಯಾರ್ಥಿಗಳಿದ್ದು, ಇವರಲ್ಲಿ 225 ಮಂದಿ ಪಿಜಿ ವಿದ್ಯಾರ್ಥಿಗಳು. ಇಂದು ಪಿಜಿ ತರಗತಿಗಳ ಭೌತಿಕ ತರಗತಿಗಳನ್ನು ನಡೆಸಲಾಗುತ್ತಿದೆ. ಪದವಿ ತರಗತಿಗಳಿಗೆ ಮಾ.2ರಿಂದ ಆಂತರಿಕ ಪರೀಕ್ಷೆಗಳು ಆರಂಭಗೊಂಡಿವೆ. ಮಾ. 4ರಂದು ಹಿಬಾ ಶೇಖ್ ಹಾಗು ಇತರ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯಲು ನಿರಾಕರಿಸಿದ್ದರು. ಈ ಸಂದರ್ಭ ತನ್ನ ವಿರುದ್ಧ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಅವಹೇಳನಕಾರಿಯಾಗಿ ವರ್ತಿಸಿದ್ದಾರೆಂದು ಆರೋಪಿಸಿ ಹಿಬಾ ಶೇಖ್ ಠಾಣೆಗೆ ದೂರು ನೀಡಿದ್ದರು. ಇದೇ ವೇಳೆ ಹಿಬಾ ಶೇಖ್ ವಿರುದ್ಧವೂ ಕಾಲೇಜಿನ ವಿದ್ಯಾರ್ಥಿಗಳು ಪ್ರಕರಣ ದಾಖಲಿಸಿದ್ದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು ಬಿಎಸ್ಸಿ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು. ಕಾಲೇಜಿನ ಇತರ ವಿದ್ಯಾರ್ಥಿಗಳಿಗೆ ಎಪ್ರಿಲ್‌ನಲ್ಲಿ ಪರೀಕ್ಷೆಯ ಹಿನ್ನೆಲೆಯಲ್ಲಿ ಮನನ ಮಾಡಿಕೊಳ್ಳಲು ರಜೆಯನ್ನು ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಅನಸೂಯ ರೈ ತಿಳಿಸಿದ್ದಾರೆ.