ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ರಾಜಕೀಯ ಪ್ರೇರಿತ: ʼವಿಮ್ʼ ಆರೋಪ

ಮಂಗಳೂರು : ಹಿಜಾಬ್ ಬಗ್ಗೆ ರಾಜ್ಯ ಹೈಕೋರ್ಟ್ ನೀಡಿದ ತೀರ್ಪು ರಾಜಕೀಯ ಪ್ರೇರಿತವಾಗಿದೆ ಎಂದು ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್ (ವಿಮ್) ಕರ್ನಾಟಕ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಮ್ ಆರೋಪಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ತೀರ್ಪು ನ್ಯಾಯ ಪರವಾಗಿಲ್ಲ. ಸಂವಿಧಾನದ ೨೫,೨೯ರ ಪರಿಚ್ಛೇದಗಳಿಗೆ ವಿರುದ್ಧವಾಗಿದೆ. ಇದರಿಂದಾಗಿ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕನ್ನು ನಿರಾಕರಿಸಲಾಗಿದೆ. ಅಷ್ಟೇ ಅಲ್ಲ, ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳನ್ನು ಕೂಡ ನ್ಯಾಯಾಲಯ ಕಸಿದಿದೆ ಎಂದು ಹೇಳಿದರು.
ಯಾವುದೇ ಒಂದು ವಿಚಾರ ಧಾರ್ಮಿಕ ಆಚರಣೆಯ ಭಾಗ ಹೌದೋ ಅಲ್ಲವೋ ಎಂದು ತೀರ್ಮಾನಿಸಬೇಕಾದುದು ಆ ಧರ್ಮದ ಮೂಲಭೂತ ಆಕರಗಳೇ ಹೊರತು ಕೋರ್ಟ್‌ಗಳಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ಕೋರ್ಟ್‌ನ ಮೆಟ್ಟಲೇರಿದ್ದೂ ಅಲ್ಲ. ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳನ್ನು ಎತ್ತಿ ಹಿಡಿಯಬೇಕಿದ್ದ ಕೋರ್ಟ್ ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದೆ. ಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸುವುದು ಅಪರಾಧವಲ್ಲ. ಆದರೆ ಮಾಧ್ಯಮಗಳು ಇಂದು ಆಕ್ಷೇಪ ವ್ಯಕ್ತಪಡಿಸಿದವರನ್ನು ಅಪರಾಧಿಗಳನ್ನಾಗಿಸುತ್ತಿರುವುದು ಖಂಡನೀಯ ಎಂದು ಶಾಹಿದಾ ತಸ್ನೀಂ ಹೇಳಿದರು.
ಹಿಜಾಬ್‌ನ ಬಗ್ಗೆ ಸರಕಾರ ತೀರ್ಮಾನ ಕೈಗೊಳ್ಳಬೇಕಿದೆ. ತೀರ್ಪನ್ನು ಗುಣಾತ್ಮಕವಾಗಿ ಪರಿಗಣಿಸಿ ಧಾರ್ಮಿಕ ಆಚರಣೆಯನ್ನು ಗೌರವಿಸಿ ವಿದ್ಯಾರ್ಥಿನಿಯರಿಗೆ ಮತ್ತು ಹಿಜಾಬ್‌ಗೆ ಹಾಗೂ ಶಿಕ್ಷಣಕ್ಕೆ ಅವಕಾಶ ಕಲ್ಪಿಸಬೇಕು. ಮುಸ್ಲಿಂ ವಿರೋಧಿ ಧೋರಣೆಯನ್ನು ಕೈಬಿಡಬೇಕು ಎಂದು ಶಾಹಿದಾ ತಸ್ನೀಂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ, ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಮಂಗಳೂರು ಅಧ್ಯಕ್ಷೆ ಫೌಝಿಯಾ ಉಪಸ್ಥಿತರಿದ್ದರು.







