ಖಾಸಗಿ ಹೊಟೇಲ್ ವಿರುದ್ಧ 40 ಪೈಸೆಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 4 ಸಾವಿರ ರೂ. ದಂಡ ವಿಧಿಸಿದ ಕೋರ್ಟ್!

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.16: ನಗರದ ಖಾಸಗಿ ಹೊಟೇಲ್ವೊಂದು 40 ಪೈಸೆ ಹೆಚ್ಚು ಶುಲ್ಕ ವಿಧಿಸಿದ್ದಕ್ಕಾಗಿ ಅದರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿಗೆ ನ್ಯಾಯಾಲಯ 4 ಸಾವಿರ ರೂ.ದಂಡ ವಿಧಿಸಿ ಆದೇಶಿಸಿದೆ.
ಅಲ್ಲದೆ, ಈ ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಸರಕಾರದ ನಿಯಮಗಳ ಪ್ರಕಾರ 50 ಪೈಸೆಗಿಂತ ಹೆಚ್ಚು ಹಣವನ್ನು ಒಂದು ರೂಪಾಯಿ ಎಂದು ಲೆಕ್ಕ ಹಾಕಬೇಕು ಎಂದು ತೀರ್ಪು ನೀಡಿದೆ.
ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿದ್ದು ಮಾತ್ರವಲ್ಲದೆ, ನ್ಯಾಯಾಧೀಶರು ಪ್ರಚಾರಕ್ಕಾಗಿ ಅಂತ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದೂರುದಾರರನ್ನು ತರಾಟೆಗೆ ತೆಗದುಕೊಂಡಿದ್ದು ಎಂಪೈರ್ ಹೊಟೇಲ್ನ ವ್ಯವಸ್ಥಾಪಕ ನಿರ್ದೇಶಕರಿಗೆ ಪರಿಹಾರವಾಗಿ 4 ಸಾವಿರ ರೂ. ದಂಡದ ರೂಪದಲ್ಲಿ ಪಾವತಿಸುವಂತೆ ಆದೇಶಿಸಿದೆ.
2021ರಲ್ಲಿ ನಡೆದಿದ್ದ ಪ್ರಕರಣ: ಈ ಘಟನೆ ನಡೆದಿದ್ದು ಮೇ 21, 2021 ರಂದು ಎಂದು ವರದಿಯಾಗಿದೆ. ಮೂರ್ತಿ ಎಂದು ಗುರುತಿಸಲಾದ ಹಿರಿಯ ನಾಗರಿಕರೊಬ್ಬರು ಸೆಂಟ್ರಲ್ ಸ್ಟ್ರೀಟ್ನಲ್ಲಿರುವ ಹೊಟೇಲ್ ಎಂಪೈರ್ಗೆ ಭೇಟಿ ನೀಡಿದರು ಮತ್ತು ಅವರಿಗೆ ಬೇಕಾದ ಊಟದ ಆರ್ಡರ್ ನೀಡಿ ಪಾರ್ಸಲ್ ತೆಗೆದುಕೊಂಡು ಹೋಗುವುದಾಗಿ ಹೇಳಿದರು. ಹೊಟೇಲ್ ಸಿಬ್ಬಂದಿಯವರು ಅವರಿಗೆ 265 ರೂಪಾಯಿಗಳ ಬಿಲ್ ನೀಡಿದರು, ಆದಾಗ್ಯೂ ಅವರ ಆರ್ಡರ್ ಮಾಡಿದ ಊಟದ ಬಿಲ್ನಲ್ಲಿರುವ ಒಟ್ಟು ಮೊತ್ತ 264 ರೂಪಾಯಿ 60 ಪೈಸೆ ಆಗಿತ್ತು.
ಆಗ ಮೂರ್ತಿ ಹೊಟೇಲ್ ಸಿಬ್ಬಂದಿಯನ್ನು ಪ್ರಶ್ನಿಸಿದರು ಮತ್ತು ಅನುಕೂಲಕರ ಪ್ರತಿಕ್ರಿಯೆ ಪಡೆಯಲು ವಿಫಲರಾದಾಗ, ರೆಸ್ಟೋರೆಂಟ್ ಗ್ರಾಹಕರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಅವರು ಬೆಂಗಳೂರು ಗ್ರಾಹಕ ವೇದಿಕೆಯನ್ನು ಸಂಪರ್ಕಿಸಿದರು. ಸೇವೆಯ ಕೊರತೆಯ ಆರೋಪದ ಮೇಲೆ ಮೂರ್ತಿ ಅವರು 1 ರೂಪಾಯಿಯನ್ನು ಪರಿಹಾರವಾಗಿ ಕೋರಿದರು ಮತ್ತು ಈ ಘಟನೆಯು ಅವರಿಗೆ 'ಮಾನಸಿಕ ಆಘಾತ ಮತ್ತು ಯಾತನೆ'ಗೆ ಕಾರಣವಾಗಿದೆ ಎಂದು ಹೇಳಿದರು.







