ಪರೀಕ್ಷೆ ವಂಚಿತರಾದ ಕಾಪು ಸರಕಾರಿ ಪದವಿ ಕಾಲೇಜಿನ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು
ಕಾಪು : ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬುಧವಾರ ಹಿಜಾಬ್ ಧರಿಸಿ ಆಗಮಿಸಿದ ಕೆಲವು ವಿದ್ಯಾರ್ಥಿನಿಯರಿಗೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಯಿತು. ಇದರಿಂದ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ಮನೆಗೆ ವಾಪಾಸ್ಸಾದರು.
ಹೈಕೋರ್ಟ್ ತೀರ್ಪು ಪದವಿ ಕಾಲೇಜುಗಳಿಗೆ ಅನ್ವಯ ಆಗುವುದಿಲ್ಲ ಎಂಬ ಕಾರಣದಿಂದ ಆತಂರಿಕ ಪರೀಕ್ಷೆ ಬರೆಯುವ ಉದ್ದೇಶದೊಂದಿಗೆ ಒಟ್ಟು ಒಂಭತ್ತು ಮಂದಿ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಬೆಳಗ್ಗೆ ಕಾಲೇಜಿಗೆ ಆಗಮಿಸಿದರು. ಆದರೆ ಪ್ರಾಂಶುಪಾಲರು ಹೈಕೋರ್ಟ್ ತೀರ್ಪಿನ ವಿಚಾರವನ್ನು ಮುಂದಿಟ್ಟು ಕೊಂಡು ಹಿಜಾಬ್ ಧರಿಸಿದ ಈ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿದರು. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದ ಹೊರಗಡೆ ಮಧ್ಯಾಹ್ನದವರೆಗೆ ನಿಂತು ಬಳಿಕ ಮನೆಗೆ ವಾಪಾಸ್ಸಾದರು.
ಇದಕ್ಕೂ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ರಿಝಾನ, ‘ಹೈಕೋರ್ಟ್ ಆದೇಶಕ್ಕೆ ನಾವು ವಿರೋಧ ಮಾಡುವುದಿಲ್ಲ. ಈ ತೀರ್ಪು ಪಿಯು ಕಾಲೇಜಿಗೆ ಹೊರತು ಪದವಿ ಕಾಲೇಜಿಗೆ ಅನ್ವಯಿಸುವುದಿಲ್ಲ. ಕುರಾನ್‌ನಲ್ಲಿ ಹಿಜಾಬ್ ಕಡ್ಡಾಯ ಎಂದು ಹೇಳಿದೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ತೆಗೆದು ತರಗತಿಗೆ ಹೋಗುವುದಿಲ್ಲ. ನಮಗೆ ಹಿಜಾಬ್ ಹಾಗೂ ಶಿಕ್ಷಣ ಎರಡೂ ಮುಖ್ಯವಾಗಿದೆ’ ಎಂದು ತಿಳಿಸಿದರು.
‘ಎರಡೂವರೆ ವರ್ಷಗಳ ಕಾಲ ನಾವು ಯಾವುದೇ ತೊಂದರೆ ಇಲ್ಲದೆ ಹಿಜಾಬ್ ಧರಿಸಿಕೊಂಡು ತರಗತಿಗೆ ಹಾಜರಾಗಿದ್ದೇವೆ. ಉಡುಪಿಯಲ್ಲಿ ಅವಕಾಶ ಇಲ್ಲ ಎಂದು ಹೇಳಿ, ಇಲ್ಲಿ ಕೂಡ ಅವಕಾಶ ನಿರಾಕರಿಸಲಾಗಿದೆ. ನಮಗೆ ಇಂದಿನ ಪರೀಕ್ಷೆ ಬರೆಯಲು ಕೂಡ ಅವಕಾಶ ನೀಡುತ್ತಿಲ್ಲ. ಇದರಿಂದ ನಮ್ಮ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ’ ಎಂದು ಅವರು ಅಳಲು ತೋಡಿಕೊಂಡರು.
‘ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪ್ರಾಂಶುಪಾಲರಲ್ಲಿ ಮನವಿ ಮಾಡಿದ್ದೇವೆ. ಆದರೆ ಪ್ರಾಂಶುಪಾಲರು ಹಿಜಾಬ್ ಹಾಕಿ ಬಂದರೆ ಅವಕಾಶ ನೀಡುವುದಿಲ್ಲ ಎಂದರು. ನಾವು ಹಿಜಾಬ್ ಹಾಕದೆ ಪರೀಕ್ಷೆಗೆ ಹಾಜರಾಗುವು ದಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಪೋಷಕರ ಸಭೆ ಕರೆದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ತಿಳಿಸಿದ್ದೇವೆ. ಅದಕ್ಕೂ ಪ್ರಾಂಶುಪಾಲರು ಸ್ಪಂದಿಸುತ್ತಿಲ್ಲ’ ಎಂದು ವಿದ್ಯಾರ್ಥಿನಿ ಶೆಹನಾಝ್ ಆರೋಪಿಸಿದರು.
‘ಕಾಲೇಜಿನ ೧೩ ವಿದ್ಯಾರ್ಥಿನಿಯರು ಆಗಮಿಸಿ ಹಿಜಾಬ್ ಹಾಕಿಕೊಂಡು ಪರೀಕ್ಷೆ ಬರೆಯಲು ಅವಕಾಶ ಕೇಳಿದರು. ಆದರೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ನಾನು ಅವಕಾಶ ನೀಡಲಿಲ್ಲ. ಈ ತೀರ್ಪು ಕೇವಲ ಪಿಯು ಮಾತ್ರಲ್ಲದೆ ರಾಜ್ಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಇದರಲ್ಲಿ ೯ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ಸು ಹೋದರೆ, ಮೂವರು ಹಿಜಾಬ್ ತೆಗೆದು ಪರೀಕ್ಷೆ ಬರೆದಿದ್ದಾರೆ’
-ಡಾ.ಅನಿಲ್ ಕುಮಾರ್, ಪ್ರಾಂಶುಪಾಲರು