ರಾಜ್ಯ ಸರಕಾರಿ ನೌಕರರ ವೇತನ ಆಯೋಗ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.16: ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರದ ನೌಕರರಂತೆ ಸರಿಸಮಾನವಾಗಿ ವೇತನ ನೀಡುವ ಸಂಬಂಧ ಅಗತ್ಯ ಶಿಫಾರಸ್ಸು ಮಾಡಲು ಆದಷ್ಟು ಶೀಘ್ರವೇ ವೇತನ ಆಯೋಗವನ್ನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಬುಧವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡುತ್ತಿದ್ದ ಅವರು, ರಾಜ್ಯದಲ್ಲಿ ಸುಮಾರು 2 ಲಕ್ಷ ಸರಕಾರಿ ನೌಕರರ ಹುದ್ದೆಗಳು ಖಾಲಿಯಿವೆ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರಕಾರಿ ನೌಕರರ ಪಾತ್ರ ಮಹತ್ವದ್ದು ಎಂದರು.
ನಮ್ಮ ಯಾವುದೆ ಯೋಜನೆಗಳಾಗಲಿ ಜನಸಾಮಾನ್ಯರಿಗೆ ತಲುಪಲು ಸರಕಾರಿ ನೌಕರರ ಮೂಲಕವೆ ಮಾಡಬೇಕು. ಆದುದರಿಂದ, ಅವರ ಬೇಡಿಕೆಯಂತೆ ಕೇಂದ್ರ ಸರಕಾರದ ನೌಕರರಿಗೆ ಸರಿಸಮಾನವಾಗಿ ವೇತನ ನೀಡುವ ಸಂಬಂಧ ಶಿಫಾರಸ್ಸು ಮಾಡಲು ವೇತನ ಆಯೋಗ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಈ ಆಯೋಗವು ಬೇರೆ ಬೇರೆ ರಾಜ್ಯಗಳಲ್ಲಿ ಇರುವ ವ್ಯವಸ್ಥೆಯ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ, ಸರಕಾರಕ್ಕೆ ವರದಿ ನೀಡಲಿದೆ. ಅದರಂತೆ, ರಾಜ್ಯ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಧನ್ಯವಾದ ಸಲ್ಲಿಕೆ: ರಾಜ್ಯ ಸರಕಾರಿ ನೌಕರರಿಗೆ ಕೇಂದ್ರ ಸರಕಾರ ಮಾದರಿಯ ವೇತನ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹಾಗೂ ಪದಾಧಿಕಾರಿಗಳು ವಿಧಾನಸೌಧದಲ್ಲಿ ಧನ್ಯವಾದ ಅರ್ಪಿಸಿದರು.







