ಕಾರ್ಮಿಕರ ಮಕ್ಕಳೂ ಅಧಿಕಾರಿಗಳಾಗಲಿ, ಮನೆಗೆ ಬೆಳಕಾಗಲಿ: ಸಚಿವ ಶಿವರಾಂ ಹೆಬ್ಬಾರ್
ಯುಪಿಎಸ್ಸಿ-ಕೆಪಿಎಸ್ಸಿ ತರಬೇತಿ ಪ್ರವೇಶ ಪತ್ರ ವಿತರಣೆ

ಬೆಂಗಳೂರು, ಮಾರ್ಚ್ 16: ಕಾರ್ಮಿಕರ ಮಕ್ಕಳು ಕಾರ್ಮಿಕರಾಗಿಯೇ ಉಳಿಯಬಾರದು ಎಂಬ ಮಹದುದ್ದೇಶದಿಂದ ಇಲಾಖೆಯು ಪ್ರತಿಭಾವಂತ ಶ್ರಮಿಕರ ಮಕ್ಕಳಿಗೆ ಉನ್ನತ ವ್ಯಾಸಂಗದ ತರಬೇತಿ ನೀಡುವ ಸಲುವಾಗಿ ಯೋಜನೆ ರೂಪಿಸಿ ಜಾರಿ ಮಾಡಿದ್ದು, ಇದರ ಸದುಪಯೋಗ ಪಡೆದುಕೊಂಡು ಉನ್ನತ ಹುದ್ದೆಗೇರುವಂತೆ ಕಾರ್ಮಿಕ ಮಕ್ಕಳಿಗೆ ಸಚಿವ ಶಿವರಾಂ ಹೆಬ್ಬಾರ್ ಕರೆ ನೀಡಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಶ್ರಮಿಕ ವರ್ಗದವರ ಮಕ್ಕಳ ಕೆಪಿಎಸ್ಸಿ ಮತ್ತು ಯುಪಿಎಸ್ಸಿ ವ್ಯಾಸಂಗಕ್ಕೆ ಅನುವಾಗುವಂತೆ ತರಬೇತಿಗಾಗಿ ಯೋಜನೆ ರೂಪಿಸಿ ಜಾರಿ ಮಾಡಲಾಗಿದೆ ಎಂದ ಸಚಿವರು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ವಿತರಿಸಿದರು.
ರಾಜ್ಯದ ಕಾರ್ಮಿಕರ ಮಕ್ಕಳು ಐಎಎಸ್, ಕೆಎಎಸ್ ಮುಂತಾದ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ತರಬೇತಿ ಪಡೆದು ಆಯ್ಕೆಯಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದ ಅವರು, ಇದಕ್ಕಾಗಿ ನುರಿತ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಮಕ್ಕಳಿಗೆ ಸುಂದರ ಭವಿಷ್ಯ ಕಲ್ಪಿಸಿಕೊಡಬೇಕು ಎಂಬ ಸದುದ್ದೇಶದಿಂದ ಇಲಾಖೆ ಈ ತರಬೇತಿ ಆಯೋಜಿಸಿದೆ. ಇದು ಅತ್ಯಂತ ಸಂತಸದ ವಿಷಯ. ಬಡವರ ಮಕ್ಕಳಿಗೂ ತರಬೇತಿ ದೊರೆಯಬೇಕು. ಅವರೂ ಭವಿಷ್ಯ ರೂಪಿಸಿಕೊಳ್ಳಬೇಕು, ಅವರಿಗೂ ಅರ್ಹತೆ ಇದೆ, ಯೋಗ್ಯತೆ ಇದೆ. ಆದರೆ ಹಣಕಾಸಿನ ತೊಂದರೆಯಿಂದ ಅವರು ತರಬೇತಿ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಂತಹ ಪ್ರತಿಭಾವಂತ ಕಾರ್ಮಿಕ ಮಕ್ಕಳಿಗೆ ಅವಕಾಶ ಎಲ್ಲ ಅವಕಾಶಗಳು ಸಿಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಇಲಾಖೆ ಕೋಟ್ಯಂತರ ಹಣವನ್ನು ವೆಚ್ಚ ಮಾಡಿ ತರಬೇತಿ ನೀಡುತ್ತಿದೆ ಎಂದರು.
ಈ ತರಬೇತಿ ಮಕ್ಕಳನ್ನು ಸಂಸ್ಥೆ ಮೂಲಕ ಆಯ್ಕೆ ಮಾಡಿದ್ದೇವೆ. ಯಾವುದೇ ಪ್ರಭಾವದಲ್ಲಿ ಆಯ್ಕೆ ಮಾಡಿಲ್ಲ. ಮಕ್ಕಳು ತರಬೇತಿ ಪಡೆದು ಅಧಿಕಾರಿಗಳಾಗಿ ಅವರ ಮನೆಗಳಿಗೆ ಬೆಳಗಾಗಲಿ ಎಂದು ಸಚಿವರು ಹಾರೈಸಿದರು.
ಬಡ ಮಕ್ಕಳಿಗೂ ಸಮಾಜದಲ್ಲಿ ಕಲಿಯುವ ಹಕ್ಕಿದೆ. ಆದ್ದರಿಂದ ಶ್ರಮಿಕರ ಬೆವರನ್ನು ಶ್ರಮಿಕರ ಮಕ್ಕಳಿಗೇ ಬಳಸಬೇಕು ಎಂಬ ಕಾರಣಕ್ಕೆ ಈ ತರಬೇತಿ ಆಯೋಜಿಸಲಾಗಿದೆ. ಈ ಅವಕಾಶವನ್ನು ಎಲ್ಲಾ ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಮಿಕ ಆಯುಕ್ತ ಅಕ್ರಂ ಪಾಷ ಅವರು, ಸ್ಪರ್ಧಾತ್ಮಕ ಪರೀಕ್ಷೆಯ ಗಂಭೀರತೆ ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಪ್ರವೇಶ ಪತ್ರ ಪಡೆದುಕೊಂಡ ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಮಾರಂಭದಲ್ಲಿ ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಜಿ. ಕಲ್ಪನ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಗುರು ಪ್ರಸಾದ್ ಎಂ.ಪಿ ಪ್ರಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಯೋಜನೆ ರೂಪು ರೇಷೆಗಳ ಬಗ್ಗೆ ವಿವರಿಸಿ ಸವಲತ್ತನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಜಂಟಿ ಕಾರ್ಯದರ್ಶಿಗಳಾದ ಡಾ. ಶಿವಪುತ್ರ ಬಾಬುರಾವ್ ಹಾಗೂ ಕಾರ್ಮಿಕ ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ ಸೇರಿದಂತೆ ಇಲಾಖೆಯ ಇತರೆ ಅಧಿಕಾರಿಗಳು, ಪರೀಕ್ಷಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪರೀಕ್ಷಾರ್ಥಿಗಳಾದ ಹಂಸಶ್ರೀ, ಭವ್ಯ ಮತ್ತಿತರರು ಅಭಿಪ್ರಾಯ ಹಂಚಿಕೊಂಡು ಇಲಾಖೆ ನೀಡುತ್ತಿರುವ ಈ ತರಬೇತಿ ಬಗ್ಗೆ ಹರ್ಷ ವ್ಯಕ್ತಪಡಿಸಿ, ಸಚಿವ ಹೆಬ್ಬಾರ್ ಮತ್ತು ಇಲಾಖೆ ಅಧಿಕಾರಿಗಳಿಗೆ ಕ್ರತಜ್ನತೆ ಸಲ್ಲಿಸಿದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಶ್ರಮಿಕ ವರ್ಗದ ಏಳಿಗೆಗಾಗಿ ಇಲಾಖೆ ಹತ್ತು ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಉನ್ನತ ವ್ಯಾಸಂಗದ ತರಬೇತಿ ಕಲ್ಯಾಣ ಮಂಡಳಿಯ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದೆ. ಪ್ರಸಕ್ತ ವರ್ಷ ಆರಂಭಿಸಲಾಗಿರುವ ಈ ಯೋಜನೆಯಡಿ ರಾಜ್ಯದ ವಿವಿಧೆಡೆ 750 ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ತರಬೇತಿ ನೀಡಲಾಗುತ್ತಿದೆ.
ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ.








