ಇಸ್ಲಾಮಿಕ್ ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸುವ ಹೈಕೋರ್ಟ್ ತೀರ್ಪು ಒಪ್ಪಲು ಅಸಾಧ್ಯ: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್

ಮಂಗಳೂರು : ಇಸ್ಲಾಮಿಕ್ ಕಾನೂನನ್ನು ತಪ್ಪಾಗಿ ವ್ಯಾಖ್ಯಾನಿಸುವ ರಾಜ್ಯ ಹೈಕೋರ್ಟ್‌ನ ತೀರ್ಪನ್ನು ಒಪ್ಪಲು ಸಾಧ್ಯವಿಲ್ಲ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್‌ನ ರಾಷ್ಟ್ರೀಯ ಸಮಿತಿಯ ಸದಸ್ಯ ಜಾಫರ್ ಸಾದಿಕ್ ಫೈಝಿ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ನ ಈ ತೀರ್ಪು ಅಸಂವಿಧಾನಿಕ. ಸಂವಿಧಾನವು ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕಾದ ನ್ಯಾಯಾಲಯವು ಧಾರ್ಮಿಕ ಹಕ್ಕುಗಳ ಉಲ್ಲಂಘನೆಯ ತೀರ್ಪು ನೀಡುವಂತಹ ಪರಿಸ್ಥಿತಿಗೆ ಬಂದು ಮುಟ್ಟಿರುವುದು ಜಾತ್ಯತೀತ ಆತ್ಮಸಾಕ್ಷಿಗೆ ನೋವು ನೀಡುವ ಆಘಾತಕಾರಿ ವಿಷಯವಾಗಿದೆ ಎಂದರು.
ಹಿಜಾಬ್ ಅಥವಾ ಶಿರವಸ್ತ್ರವು ದೇಶದ ಎಲ್ಲಾ ಧರ್ಮೀಯರಲ್ಲಿ ಕಂಡು ಬರುವ ಧಾರ್ಮಿಕ ಸಂಪ್ರದಾಯವಾಗಿದೆ. ಅದನ್ನು ಮುಸ್ಲಿಮರಿಗೆ ಮಾತ್ರ ತಡೆ ಹಿಡಿಯುವುದು ವಿಚಾರಧಾರೆಯ ಮನೋಸ್ಥಿತಿಯಾಗಿದೆ. ತನಗೆ ಬೇಕಾದಂತೆ ವಸ್ತ್ರ ಧರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಮಹಿಳೆಯರು ಹಿಜಾಬ್ ಧರಿಸುವುದು ಕಡ್ಡಾಯ ಎಂದು ಕುರಾನ್‌ನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ ಹಿಜಾಬ್‌ಗೆ ಸಂಬಂಧಿಸಿದಂತೆ ಮಂಗಳವಾರ ನೀಡಿದ ತೀರ್ಪಿನ ಮೂಲಕ ನ್ಯಾಯಾಲಯವು ಅನಗತ್ಯವಾಗಿ ಕುರಾನ್ ಮತ್ತು ಸಂವಿಧಾನವನ್ನು ತಪ್ಪಾಗಿ ನಿರೂಪಿಸಿದೆ ಎಂದು ಜಾಫರ್ ಸಾದಿಕ್ ಫೈಝಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ದೂರವಿಡಲು ನಡೆಸಿದ ಷಡ್ಯಂತ್ರವಾಗಿದೆ, ಧಾರ್ಮಿಕ ಸ್ವಾತಂತ್ರ್ಯದ ಜೊತೆಗೆ ಶಿಕ್ಷಣ ಪಡೆಯುವ ಹಕ್ಕು ವಿದ್ಯಾರ್ಥಿನಿಯರಿಗಿದೆ. ಹೈಕೋರ್ಟ್ ತೀರ್ಪು ಧರ್ಮಾಧರಿತ ಮತ್ತು ತಾರತಮ್ಯದಿಂದ ಕೂಡಿದೆ. ಈ ತೀರ್ಪು ಸಂಘ ಪರಿವಾರದ ಸಿವಿಲ್ ಕೋಡ್‌ನ ಒಂದು ಭಾಗವಾಗಿದೆ. ಹಾಗಾಗಿ ಈ ತೀರ್ಪಿನ ಬಗ್ಗೆ ಮರು ಪರಿಶೀಲಿಸಬೇಕು ಎಂದರು.
ಬಾಬರಿ ಮಸೀದಿಗೆ ಸಂಬಂಧಿಸಿದ ತೀರ್ಪು ಸತ್ಯಾಸತ್ಯತೆಗಳನ್ನು ಮೀರಿ ಇತರರ ನಂಬಿಕೆಗಳು ಮತ್ತು ಭಾವನೆಗಳನ್ನು ಆಧರಿಸಿದೆ. ಆದರೆ ಹಿಜಾಬ್‌ಗೆ ಸಂಬಂಧಿದಂತೆ ರಾಜ್ಯ ಹೈಕೋರ್ಟ್‌ನ ತೀರ್ಪು ಕಾನೂನು ಮತ್ತು ಸತ್ಯಗಳನ್ನು ಬದಲಿಸಿದೆ. ಅಲ್ಲದೆ ನಿರ್ದಿಷ್ಟ ವಿಭಾಗದ ಭಾವನೆಗಳಿಗೆ ಮಹತ್ವ ನೀಡಿದೆ. ಈ ಪ್ರವೃತ್ತಿಯು ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ. ದೇಶದಲ್ಲಿ ಸಂಘ ಪರಿವಾರದ ಫ್ಯಾಶಿಸಂ ಅಲ್ಪಸಂಖ್ಯಾತರ ಹಕ್ಕುಗಳನ್ನು ಮತ್ತು ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿ ಸಂವಿಧಾನಿಕವಾದ ಹಕ್ಕನ್ನು ಕಸಿಯುತ್ತಿರುವಾಗ ಈ ದುಷ್ಕೃತ್ಯವನ್ನು ಖಂಡಿಸಲೇಬೇಕಾಗಿದೆ ಎಂದು ಜಾಫರ್ ಸಾದಿಕ್ ಫೈಝಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಸಮಿತಿಯ ಸದಸ್ಯ ಅಬ್ದುಲ್ ಹಮೀದ್ ಮುಸ್ಲಿಯಾರ್, ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಹನೀಫಿ ಉಪಸ್ಥಿತರಿದ್ದರು.