ದರೋಡೆಗೆ ಯತ್ನಿಸಿದ ಪ್ರಕರಣ: ಆರೋಪಿಯ ಜಾಮೀನು ರದ್ದು ಕೋರಿದ್ದ ಪೊಲೀಸರಿಗೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್

ಫೈಲ್ ಚಿತ್ರ
ಬೆಂಗಳೂರು, ಮಾ.16: ದರೋಡೆಗೆ ಯತ್ನಿಸಿದ ಆರೋಪ ಪ್ರಕರಣದಲ್ಲಿ 2 ವರ್ಷಕ್ಕೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ ನೀಡಿದ್ದ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ನಗರದ ರೈಲ್ವೆ ಪೊಲೀಸರಿಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿ ಸ್ಟೀಫನ್ಗೆ ನಗರದ 52ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕೋರಿ ರೈಲ್ವೆ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ಹೊರಡಿಸಿದೆ.
ಪೀಠ ತನ್ನ ತೀರ್ಪಿನಲ್ಲಿ 2018ರ ಆ.7ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ನಡೆಸಿದ್ದ ಪೊಲೀಸರು 2018ರ ಡಿಸೆಂಬರ್ 20ರಂದು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿ 2 ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ.
ಆರೋಪ ಸಾಬೀತುಪಡಿಸಲು ಸೂಕ್ತ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ 2020ರ ಅಕ್ಟೋಬರ್ 13ರಂದುಆರೋಪಿಗೆ ಜಾಮೀನು ನೀಡಿದೆ. ನಂತರವೂ ಸೂಕ್ತ ಕಾರಣಗಳಿಲ್ಲದೆ ರೈಲ್ವೆ ಪೊಲೀಸರು ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಿರುವ ಕ್ರಮವನ್ನು ನ್ಯಾಯಾಂಗ ಪ್ರಕ್ರಿಯೆಯ ದರ್ಬಳಕೆಯಲ್ಲದೇ ಮತ್ತೇನೂ ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ರೈಲ್ವೆ ಪೊಲೀಸರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಿದೆ. ದಂಡದ ಮೊತ್ತವನ್ನು ನಾಲ್ಕು ವಾರಗಳಲ್ಲಿ ವಕೀಲರ ಗುಮಾಸ್ತರ ಕಲ್ಯಾಣ ಸಂಘಕ್ಕೆ ಪಾವತಿಸುವಂತೆ ಆದೇಶಿಸಿದೆ.
ಪ್ರಕರಣವೇನು: 2018ರ ಆ.7ರ ರಾತ್ರಿ 8 ಗಂಟೆ ಸುಮಾರಿಗೆ ಸ್ಟೀಫನ್ ಹಾಗೂ ಆತನ ಸಹಚರರು ಸಾರ್ವಜನಿಕರನ್ನು ದರೋಡೆ ಮಾಡುವುದಕ್ಕಾಗಿ ನಗರದ ಓಕಳಿಪುರ ರೈಲ್ವೆ ಸೇತುವೆ ಬಳಿ ಪೊದೆಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅವಿತು ಕೂತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರು ದಾಳಿ ನಡೆಸಿ ಸ್ಟೀಫನ್ ಹಾಗೂ ಇತರರನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ಪ್ರಕರಣ ಸಂಬಂಧ ಸ್ಟೀಫನ್ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ. ನಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ನಗರದ 52ನೆ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, 2020ರ ಅ.13ರಂದು ಜಾಮೀನು ನೀಡಿತ್ತು. ಆ ಬಳಿಕ ಜಾಮೀನು ರದ್ದು ಕೋರಿ ರೈಲ್ವೆ ಪೊಲೀಸರು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.







