ಬೆಂ.ವಿ.ವಿ ಕುಲಪತಿ ವೇಣುಗೋಪಾಲ್ ನೇಮಕ ರದ್ದು ಆದೇಶ ಎತ್ತಿಹಿಡಿದ ಹೈಕೋರ್ಟ್

ಬೆಂಗಳೂರು, ಮಾ.16: ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಸೇರಿ ಹಲವು ಅಕ್ರಮಗಳ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಕೆ.ಆರ್.ವೇಣುಗೋಪಾಲ್ ನೇಮಕ ರದ್ದುಪಡಿಸಿದ್ದ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಕೆ.ಆರ್.ವೇಣುಗೋಪಾಲ್ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಪ್ರತ್ಯೇಕವಾಗಿ ಸಲ್ಲಿಸಿದ್ದ ಎರಡು ಮೇಲ್ಮನವಿಗಳನ್ನು ಆಲಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಎತ್ತಿಹಿಡಿದಿದೆ.
ನಿವೃತ್ತ ಪ್ರೊ.ಸಂಗಮೇಶ್ ಪಾಟೀಲ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ್ದ ನ್ಯಾ.ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ಪೀಠ, ಕೆ.ಆರ್.ವೇಣುಗೋಪಾಲ್ ನೇಮಕಕ್ಕೆ ಸರಕಾರದಿಂದ ಕುಲಾಧಿಪತಿಯೂ ಆಗಿರುವ ರಾಜ್ಯಪಾಲರು ಒಪ್ಪಿಗೆ ಪಡೆಯದೇ ಇರುವುದರಿಂದ ಆ ನೇಮಕ ಊರ್ಜಿತವಾಗುವುದಿಲ್ಲ. ಹೀಗಾಗಿ, ವೇಣುಗೋಪಾಲ್ ನೇಮಕ ಮಾಡಿ 2018ರ ಜೂ.12ರಂದು ಹೊರಡಿಸಿರುವ ಆದೇಶ ರದ್ದುಗೊಳಿಸಲಾಗುವುದು ಎಂದು ಆದೇಶಿಸಿತ್ತು. ಅರ್ಜಿದಾರರ ಪರವಾಗಿ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ವಾದ ಮಂಡಿಸಿದ್ದರು.
Next Story





