ಮುಸ್ಲಿಮ್ ಮಹಿಳೆಯರ ಹಕ್ಕಿಗೆ ಧಕ್ಕೆಯಾಗಿದೆ: ವಿವಿಧ ಸಂಘಟನೆಗಳ ಮುಖಂಡರ ಒಕ್ಕೊರಲಿನ ಹೇಳಿಕೆ
ಹಿಜಾಬ್ ಪ್ರಕರಣ ಕುರಿತ ಹೈಕೋರ್ಟ್ ಆದೇಶ

ಬೆಂಗಳೂರು, ಮಾ.16: ಹಿಜಾಬ್ ಧರಿಸುವುದು ಇಸ್ಲಾಮ್‍ನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶದಿಂದ ಮುಸ್ಲಿಮ್ ಮಹಿಳೆಯರ ಸ್ವಾಯತ್ತತೆ ಮತ್ತು ಆಯ್ಕೆಯ ಹಕ್ಕಿಗೆ ಧಕ್ಕೆ ಉಂಟಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ಡಾ.ಆಸಿಫಾ ನಿಸಾರ್ ಸೇರಿ ಹಲವರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಮುಸ್ಲಿಮ್ ವಿದ್ಯಾರ್ಥಿಗಳಿಗೆ ತಮ್ಮ ನಂಬಿಕೆಯ ಹಕ್ಕು ಮತ್ತು ಶಿಕ್ಷಣದ ಹಕ್ಕುಗಳ ನಡುವೆ ಆಯ್ಕೆ ಮಾಡುವ ಒತ್ತಡದ ಪರಿಸ್ಥಿತಿ ನಿರ್ಮಾಣ ಮಾಡಿ, ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮ್ ಧರ್ಮದ ಗುರುತುಗಳನ್ನು ಗುರಿಯಾಗಿಸುವ ಮತ್ತು ನಿಂದಿಸುವ ನಿರಂತರ ಪ್ರಯತ್ನಗಳು ಮುಸ್ಲಿಮ್ ಅಲ್ಪಸಂಖ್ಯಾತರ ಮೇಲಿನ ದಾಳಿಯಾಗಿದೆ. ಇದು ಅವರ ಘನತೆಯ ಹಕ್ಕು ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸರಕಾರಿ ಶಾಲೆಗಳು ಸಂವಿಧಾನದ ಆಶಯಗಳಿಗೆ ಅನುಗುಣವಾಗಿರುವ ಸಮಾನತೆ ಮತ್ತು ಭ್ರಾತೃತ್ವವನ್ನು ಪೋಷಿಸುವ ಸ್ಥಳಗಳಾಗಿವೆ. ಹೈಕೋರ್ಟ್ ಆದೇಶದಿಂದ ಮುಸ್ಲಿಮ್ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಂದ ಶಿಕ್ಷಣ ಪಡೆಯುವ ಸಾಧ್ಯತೆಯನ್ನು ತಡೆಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹಕ್ಕೊತ್ತಾಯಗಳು: ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕುಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ತಮ್ಮ ಪರೀಕ್ಷೆಗಳನ್ನು ಬರೆಯಲು ಅನುಮತಿ ನೀಡಬೇಕು. ತರಗತಿಗಳು ಮತ್ತು ಪರೀಕ್ಷೆಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಮತ್ತು ಅವರು ತಪ್ಪಿಸಿಕೊಂಡ ಪರೀಕ್ಷೆಗಳನ್ನು ಒಳಗೊಂಡಂತೆ ಅವರ ಪರೀಕ್ಷೆಗಳನ್ನು ಬರೆಯಲು ತಕ್ಷಣವೇ ಅನುಮತಿಸಬೇಕು ಎಂದು ಹಕ್ಕೊತ್ತಾಯದಲ್ಲಿ ಉಲ್ಲೇಖಿಸಿದ್ದಾರೆ.
ಆಡಳಿತ ಮತ್ತು ವಿರೋಧ ಪಕ್ಷಗಳು ತಕ್ಷಣವೇ ಕರ್ನಾಟಕ ವಿಧಾನಮಂಡಲದಲ್ಲಿ ಈ ವಿಷಯವನ್ನು ಚರ್ಚಿಸಬೇಕು ಮತ್ತು ಮುಸ್ಲಿಮ್ ಹೆಣ್ಣುಮಕ್ಕಳು ಸೇರಿ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಮಾರ್ಗಗಳನ್ನು ರೂಪಿಸಬೇಕು ಎಂಬ ಅಂಶಗಳು ಸೇರಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಡಿಎಸ್‍ಎಸ್ ಮುಖಂಡ ಆರ್.ಮೋಹನ್‍ರಾಜ್, ಕರ್ನಾಟಕ ಜನಶಕ್ತಿ ಎಸ್.ಗೌರಿ, ಬಹುತ್ವ ಕರ್ನಾಟಕದ ಮೈತ್ರೇಯಿ, ಪಿಯುಸಿಎಲ್ ಕರ್ನಾಟಕ ಅರವಿಂದ್ ನರೈನ್, ಜಮಾಅತೆ ಇಸ್ಲಾಮಿ ಹಿಂದ್‍ನ ಅಕ್ಬರ್ ಅಲಿ, ದಲಿತ ಮೈನಾರಿಟಿ ಸೇನೆಯ ಎ.ಜೆ.ಖಾನ್ ಸೇರಿ ಹಲವರು ಒಕ್ಕೊರಲಿನಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.







