ಚುನಾವಣಾ ಜಾಹಿರಾತಿಗೆ ಬಿಜೆಪಿಗೆ ಕಡಿಮೆ ಶುಲ್ಕ ವಿಧಿಸಿದ ಫೇಸ್ ಬುಕ್: ಟಿಆರ್ ಸಿ, ಆ್ಯಡ್.ವಾಚ್ ನಿಂದ ಬಹಿರಂಗ
ಹೊಸದಿಲ್ಲಿ, ಮಾ. 16: ಭಾರತದ ಫೇಸ್ ಬುಕ್ ನ ಅಲ್ಗಾರಿತಮ್ ಇತರ ರಾಜಕೀಯ ಪಕ್ಷಗಳಿಗಿಂತ ಆಡಳಿತಾರೂಢ ಬಿಜೆಪಿಗೆ ಅಗ್ಗದ ದರಲ್ಲಿ ಜಾಹೀರಾತು ಪ್ರಸಾರ ಮಾಡಲು ಅವಕಾಶ ನೀಡಿದೆ ಎಂದು 10 ಚುನಾವಣೆಗಳಲ್ಲಿ ಹಾಗೂ 22 ತಿಂಗಳುಗಳಲ್ಲಿ ಜಾಹೀರಾತು ಮೇಲೆ ಮಾಡಿದ ವೆಚ್ಚದ ವಿಶ್ಲೇಷಣೆ ತಿಳಿಸಿದೆ.
ಬಿಜೆಪಿ ಜಯ ಗಳಿಸಿದ 2019ರ ಲೋಕಸಭಾ ಚುನಾವಣೆ ಸೇರಿದಂತೆ 10ರಲ್ಲಿ 9 ಚುನಾವಣೆಗಳ ಸಂದರ್ಭ ಜಾಹೀರಾತು ಪ್ರಕಟಿಸಲು ಬಿಜೆಪಿಗೆ ಅದರ ಪ್ರತಿಸ್ಪರ್ಧಿ ಪಕ್ಷಗಳಿಗಿಂತ ಅಗ್ಗದ ದರದಲ್ಲಿ ಜಾಹೀರಾತು ಪ್ರಸಾರ ಮಾಡಲು ಅವಕಾಶ ನೀಡಲಾಗಿದೆ ಎಂದು ವಿಶ್ಲೇಷಣೆ ಹೇಳಿದೆ.
ಈ ಅನುಕೂಲಕರ ಬೆಲೆ ಭಾರತದಲ್ಲಿ ಫೇಸ್ಬುಕ್ ಅತಿ ದೊಡ್ಡ ರಾಜಕೀಯ ಬಳಕೆದಾರಾಗಿರುವ ಬಿಜೆಪಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ತಲಪುಲು ಅವಕಾಶ ನೀಡಿದೆ. ಅಲ್ಲದೆ, ಚುನಾವಣಾ ಪ್ರಚಾರಗಳಲ್ಲಿ ಬಲ ನೀಡಿದೆ.
ಭಾರತ ಮೂಲದ ಲಾಭ ರಹಿತ ಮಾಧ್ಯಮ ಸಂಸ್ಥೆ ದಿ ರಿಪೋರ್ಟರ್ಸ್ ಕಲೆಕ್ಟಿವ್ (ಟಿಆರ್ಸಿ) ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ರಾಜಕೀಯ ಜಾಹೀರಾತುಗಳ ಅಧ್ಯಯನ ನಡೆಸುತ್ತಿರುವ ಸಂಶೋಧನ ಯೋಜನೆ ಆ್ಯಡ್. ವಾಚ್ 2019 ಫೆಬ್ರವರಿ ಹಾಗೂ 2020 ನವೆಂಬರ್ ನಡುವೆ ಫೇಸ್ಬುಕ್ನಲ್ಲಿ ಪ್ರಸಾರ ಮಾಡಲಾದ 536,070 ರಾಜಕೀಯ ಜಾಹೀರಾತುಗಳ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಅವು ಪೇಸ್ಬುಕ್ ಸಂಸ್ಥೆಯ ವಿವಿಧ ವೇದಿಕೆಗಳಲ್ಲಿ ಪ್ರಸಾರವಾದ ರಾಜಕೀಯ ಜಾಹೀರಾತುಗಳನ್ನು ಆ್ಯಡ್ ಲೈಬ್ರೆರಿ ಅಪ್ಲಿಕೇಷನ್ ಪ್ರೋಗ್ರಾಮಿಂಗ್ ಇಂಟರ್ಪೇಸ್ (ಎಪಿಐ), ಮೇಟಾ ಫ್ಲಾಟ್ಫಾರ್ಮ್ಸ್ ಇಂಕ್ನ ‘ಟ್ರಾನ್ಸಪರೆನ್ಸಿ’ ಸಾಧನದ ಮೂಲಕ ಕಲೆ ಹಾಕಿವೆ.
ಜಾಹೀರಾತನ್ನು 10 ಲಕ್ಷ ಬಾರಿ ಪ್ರದರ್ಶಿಸಲು ಬಿಜೆಪಿ, ಅದರ ಅಭ್ಯರ್ಥಿಗಳು ಹಾಗೂ ಅಂಗ ಸಂಸ್ಥೆಗಳಿಗೆ ಫೇಸ್ ಬುಕ್ 41,844 ರೂಪಾಯಿ ಶುಲ್ಕ ವಿಧಿಸಿತ್ತು. ಆದರೆ, ಬಿಜೆಪಿಯ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್, ಅದರ ಅಭ್ಯರ್ಥಿಗಳು ಹಾಗೂ ಅಂಗ ಸಂಸ್ಥೆಗಳಿಗೆ 53,776 ರೂಪಾಯಿ ಶುಲ್ಕ ವಿಧಿಸಿತ್ತು. ಒಂದೇ ಸಂಖ್ಯೆಯ ಪ್ರದರ್ಶನಕ್ಕೆ ಸುಮಾರು ಶೇ. 29ರಷ್ಟು ಹೆಚ್ಚು ಶುಲ್ಕವನ್ನು ಕಾಂಗ್ರೆಸ್ಗೆ ಫೇಸ್ಬುಕ್ ವಿಧಿಸಿತ್ತು. ಟಿಆರ್ಸಿ ಹಾಗೂ ಆ್ಯಡ್.ವಾಚ್ ಪ್ರಾಥಮಿಕವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಅನ್ನು ಹೋಲಿಸಿದೆ. ಯಾಕೆಂದರೆ ಈ ಎರಡು ಪಕ್ಷಗಳು ಜಾಹೀರಾತು ಪ್ರಸಾರಕ್ಕೆ ಅತ್ಯಧಿಕ ಹಣ ವೆಚ್ಚ ಮಾಡುತ್ತವೆ. ಲಭ್ಯವಾದ 22 ತಿಂಗಳ ಅವಧಿಯ ದತ್ತಾಂಶದಲ್ಲಿ ಬಿಜೆಪಿ ಹಾಗೂ ಅದರ ಅಂಗ ಸಂಸ್ಥೆಗಳು ಫೇಸ್ ಬುಕ್ ಮೂಲಕ ತಮ್ಮ ಅಧಿಕೃತ ಪೇಜ್ ನಲ್ಲಿ ಜಾಹೀರಾತು ಪ್ರಸಾರ ಮಾಡಲು ಒಟ್ಟು 10 ಕೋಟಿ 41 ಲಕ್ಷ ರೂಪಾಯಿಯ ವೆಚ್ಚ ಮಾಡಿವೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಹಾಗೂ ಅದರ ಅಂಗ ಸಂಸ್ಥೆಗಳು 6 ಕೋಟಿ 44 ಲಕ್ಷ ರೂಪಾಯಿ ವೆಚ್ಚ ಮಾಡಿದೆ.
ಆದರೆ, ಇಂತಹದೇ ಜಾಹೀರಾತಿಗೆ ಕಾಂಗ್ರೆಸ್ ಗೆ ಫೇಸ್ಬುಕ್ ಅತ್ಯಧಿಕ ದರ ವಿಧಿಸಿದೆ. ಬಿಜೆಪಿಯ ಜಾಹೀರಾತಿನ ವೀಕ್ಷಣೆಯಷ್ಟೇ ಸಂಖ್ಯೆಯ ವೀಕ್ಷಣೆಗೆ ಬಿಜೆಪಿಗಿಂತ 11.7 ದಶಲಕ್ಷ ರೂಪಾಯಿ ಹೆಚ್ಚು ಶುಲ್ಕವನ್ನು ಕಾಂಗ್ರೆಸ್ಗೆ ಫೇಸ್ಬುಕ್ವಿಧಿಸಿದೆ. ಬಿಜೆಪಿಯನ್ನು ಪ್ರಚಾರ ಮಾಡಲು, ಅದರ ಕಾರ್ಯ ಸಾಧ್ಯತೆ ಉತ್ತೇಜಿಸಲು ಹಾಗೂ ಚುನಾವಣೆಯಲ್ಲಿ ಮತದಾರರನ್ನು ತಲುಪಲು; ಅಲ್ಲದೆ, ಪ್ರತಿಪಕ್ಷ ಹಾಗೂ ಅದರ ಅಭ್ಯರ್ಥಿಗಳನ್ನು ಪ್ರಚಾರ ಮಾಡುವ ಸರಿಸುಮಾರು ಎಲ್ಲ ಇಂತಹ ಜಾಹೀರಾತುಗಳನ್ನು ನಿರ್ಬಂಧಿಸಲು ಕೂಡ ದೊಡ್ಡ ಸಂಖ್ಯೆಯ ಗೋಸ್ಟ್ (ನಕಲಿ ಜಾಹೀರಾತುದಾರರು) ಹಾಗೂ ಪೋಷಕ ಜಾಹೀರಾತುದಾರರಿಗೆ ಫೇಸ್ಬುಕ್ ಅವಕಾಶ ನೀಡಿರುವುದನ್ನು ಟಿಆರ್ಸಿ ಹಾಕೂ ಆ್ಯಡ್. ವಾಚ್ ವಿಶ್ಲೇಷಿಸಿದೆ. ಈ ಸರಣಿಯ ಎರಡನೇ ಭಾಗದಲ್ಲಿ ಬಹಿರಂಗಪಡಿಸಿದೆ.