ಬೆಂಗಳೂರಿನ ರಸ್ತೆಗಳಲ್ಲಿ ಅಪಾಯ ಅಧಿಕ: ಸಿಎಜಿ ವರದಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.16: ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ಪ್ರತಿ ಕಿ.ಮೀ ರಸ್ತೆ ಗುಂಡಿಗಳು ಒಳಗೊಂಡತೆ ಸರಾಸರಿ 19-20 ಅಪಾಯಗಳನ್ನು ಹೊಂದಿದೆ ಎಂದು ಭಾರತ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ(ಸಿಎಜಿ) ವರದಿ ಬಹಿರಂಗಪಡಿಸಿದೆ.
ಬುಧವಾರ ನಗರದ ಮಹಾಲೆಕ್ಕ ಪರಿಶೋಧನಾ ಕಚೇರಿ ಸಭಾಂಗಣದಲ್ಲಿ 2021ನೇ ವಾರ್ಷಿಕ ಸಾಲಿನ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಕಾರ್ಯನಿರ್ವಹಣೆ ಕುರಿತ ವರದಿಯನ್ನು ಮಹಾಲೇಖಪಾಲಕ ಅನೂಪ್ ಫ್ರಾನ್ಸಿಸ್ ಡುಂಗ್ ಡುಂಗ್ ಬಿಡುಗಡೆಗೊಳಿಸಿದರು.
ಬಳಿಕ ಅವರು ವರದಿಯ ಅಂಶಗಳನ್ನು ಉಲ್ಲೇಖಿಸಿ, ಬಿಬಿಎಂಪಿ ರಸ್ತೆಗಳು ರಸ್ತೆ ಬಳಕೆದಾರರಿಗೆ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ. 2014 ಎಪ್ರಿಲ್ನಿಂದ 2021ರ ಮಾರ್ಚ್ವರೆಗಿನ ಅವಧಿಯಲ್ಲಿ ರಸ್ತೆ ಸುರಕ್ಷತೆ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಿದ್ದು, ಆಯ್ಕೆಯಾದ ಮಾದರಿ ರಸ್ತೆ ವಿವರಣೆಗಳ ಜಂಟಿ ಪರಿಶೀಲನೆಯಿಂದ ರಸ್ತೆ ಬಳಕೆ ಅತ್ಯಂತ ಅಪಾಯಕಾರಿ ಎಂದು ತಿಳಿದುಬಂದಿದೆ ಎಂದರು.
ಪ್ರತಿ ಕಿ.ಮೀಗೆ ರಾಜ್ಯ ಹೆದ್ದಾರಿಯಲ್ಲಿ ಶೇ.8.87ರಷ್ಟು ಜಿಲ್ಲಾ ಮುಖ್ಯರಸ್ತೆಗಳು ಶೇ8.43ರಷ್ಟು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಶೇ.7.39ರಷ್ಟು ಅಪಾಯಗಳನ್ನು ಹೊಂದಿವೆ ಎಂದು ಉಲ್ಲೇಖಿಸಲಾಗಿದೆ. 2015ಕ್ಕೆ ಹೋಲಿಸಿದರೆ 2020ರಲ್ಲಿ ಮಾರಣಾಂತಿಕ ಅಪಘಾತಗಳು ಹೆಚ್ಚಾಗಿ ರಸ್ತೆ ಸುರಕ್ಷತಾ ನೀತಿಯಲ್ಲಿ ನಿಗದಿಪಡಿಸಿದ್ದು ಗುರಿ ಸಾಧಿಸಿಲ್ಲ ಎಂದು ಅವರು ನುಡಿದರು.
2019ರವರೆಗೆ ಅಪಘಾತಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗಿಲ್ಲ ಎಂದಿದೆ. ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವೂ ಕಳೆದ ಅಕ್ಟೋಬರ್ವರೆಗೂ ನಿಯಮಗಳನ್ನು ರಚನೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗಳ ಕಾರ್ಯ ನಿರ್ವಹಣೆಗೆ ಕ್ರಿಯಾ ಯೋಜನೆಯನ್ನು ರಚಿಸಲು ಮಾರ್ಗಸೂಚಿ ಹೊರಡಿಸಿಲ್ಲ ಎಂದು ತಿಳಿಸಿದರು.
ಗುರುತಿಸಲಾದ ಕಪ್ಪುಚುಕ್ಕೆ ಸ್ಥಳಗಳನ್ನು ಶೀಘ್ರವಾಗಿ ಸರಿಪಡಿಸುವಲ್ಲಿ ಸಂಬಂಧಿಸಿದ ರಸ್ತೆ ನಿರ್ವಹಣಾ ಸಂಸ್ಥೆಗಳು ವಿಫಲವಾಗಿವೆ. ಮೋಟಾರು ವಾಹನಗಳ ನಿರೀಕ್ಷಕರ ಶ್ರೇಣಿಯಲ್ಲಿ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಪೊಲೀಸ್ ಇಲಾಖೆ ಪರಿಚಯಿಸಿದ್ದ ಹೆದ್ದಾರಿ ಗಸ್ತು ನಿರೀಕ್ಷಿತ ರೀತಿಯಲ್ಲಿ ಕಾರ್ಯ ನಿರ್ವಹಿಸಿಲ್ಲ. ಬೇರೆ ಉದ್ದೇಗಳಿಗೆ ಬಳಕೆಯಾಗಿದೆ ಎಂದು ವಿವರಸಿದರು.
ಆರು ಸಾವಿರ ಪ್ರಕರಣಗಳಲ್ಲಿ 30 ನಿಮಿಷಗಳಿಗಿಂತ ಹೆಚ್ಚು ಕಾಲ ವಿಳಂಬವಾಗಿದ್ದು, ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆಯದಿರುವುದು ಆಂಬ್ಯುಲೆನ್ಸ್ಗಳ ಕೊರತೆಯನ್ನು ಸೂಚಿಸುತ್ತಿದೆ ವರದಿಯಲ್ಲಿ ಉಲ್ಲೇಖಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
ಅದೇ ರೀತಿ, ಮೋಟಾರು ವಾಹನಗಳ ನಿರೀಕ್ಷಕರ ಶ್ರೇಣಿಯಲ್ಲಿ ಹೆಚ್ಚಿನ ಹುದ್ದೆಗಳು ಖಾಲಿ ಇರುವುದರಿಂದ ವಾಹನಗಳಿಗೆ ಚಾಲನಾ ಪರವಾನಗಿ ಮತ್ತು ಅರ್ಹತಾ ಪ್ರಮಾಣ ಪತ್ರಗಳನ್ನು ಸೂಕ್ತ ಪ್ರಕ್ರಿಯೆ ಅನುಸರಿಸದೆ ನೀಡಲಾಗಿದೆ ಎಂದು ಆರೋಪಿಸಿದರು.
2019-20ರ ಅವಧಿಯಲ್ಲಿ 480.50 ಕೋಟಿ ಸಂಗ್ರಹವಾಗಿದ್ದ ಮೊತ್ತವನ್ನು 2020-21ರಲ್ಲಿ ನಿಧಿಗೆ ವರ್ಗಾಯಿಸಲಾಗಿದೆ. ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಪ್ರಾಧಿಕಾರವು 100 ಕೋಟಿ ರು. ಅನುದಾನಕ್ಕೆ ಅನುಮೋದನೆ ನೀಡಿದೆ. ಆದರೆ, ಪ್ರಾಧಿಕಾರವು ಅನುದಾನ ಪಡೆದವರಿಂದ ಬಳಕೆ ಪ್ರಮಾಣ ಪತ್ರ ಪಡೆದಿಲ್ಲ ಎಂದು ಸಿಎಜಿ ತಿಳಿಸಿದೆ.
22 ಜಿಲ್ಲೆಗಳಲ್ಲಿ ಆಘಾತ ಆರೈಕೆ ಕೇಂದ್ರ (ಟಿಸಿಸಿ) ಸ್ಥಾಪನೆಗೆ ಆರೋಗ್ಯ ಇಲಾಖೆ ಯಾವುದೇ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿಲ್ಲ. 90 ಸಾವಿರ ನಿದರ್ಶನಗಳಲ್ಲಿ, ಅಪಘಾತ ಸ್ಥಳಗಳಿಂದ ಆಂಬ್ಯುಲೆನ್ಸ್ಗಳ ಮೂಲ ಸ್ಥಳವು ದೂರದಲ್ಲಿದ್ದರಿಂದ ಮತ್ತು ಆರು ಸಾವಿರ ಪ್ರಕರಣಗಳಲ್ಲಿ 30 ನಿಮಿಷಗಳಿಗಿಂತ ಹೆಚ್ಚು ವಿಳಂಬವಾದ ಕಾರಣ ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ದೊರೆತಿಲ್ಲ ಮತ್ತು ಇದು ಆಂಬ್ಯುಲೆನ್ಸ್ಗಳ ಕೊರತೆಯನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದರು.







