ಆಶಿಷ್ ಮಿಶ್ರಾಗೆ ಜಾಮೀನು ಪ್ರಶ್ನಿಸಿರುವ ಅರ್ಜಿ ಕುರಿತು ಉತ್ತರ ಪ್ರದೇಶಕ್ಕೆ ಸುಪ್ರೀಂ ನೋಟಿಸ್
ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ

ಹೊಸದಿಲ್ಲಿ,ಮಾ.16: ಕೇಂದ್ರ ಸಚಿವ ಅಜಯ ಮಿಶ್ರಾರ ಪುತ್ರ ಹಾಗೂ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿ ಆಶಿಷ್ ಮಿಶ್ರಾಗೆ ನೀಡಿರುವ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸನ್ನು ಹೊರಡಿಸಿದೆ.
ಮಿಶ್ರಾಗೆ ಜಾಮೀನು ನೀಡಿಕೆಯ ಬಳಿಕ ಪ್ರಕರಣದ ಸಾಕ್ಷಿಯೋರ್ವರ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿ ಕೆಲವು ಸಂತ್ರಸ್ತರ ಸಂಬಂಧಿಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು, ಸಾಕ್ಷಿಗಳಿಗೆ ರಕ್ಷಣೆಯನ್ನು ಒದಗಿಸಲಾಗಿದೆ ಎನ್ನುವುದನ್ನು ಖಚಿತಪಡಿಸುವಂತೆ ಉ.ಪ್ರ.ಸರಕಾರಕ್ಕೆ ಸೂಚಿಸಿತು. ಈ ವಿಷಯದಲ್ಲಿ ಉತ್ತರವನ್ನು ಸಲ್ಲಿಸುವಂತೆಯೂ ಅದು ನಿರ್ದೇಶ ನೀಡಿತು.
ಸಂತ್ರಸ್ತರ ಸಂಬಂಧಿಕರ ಪರ ಹಿರಿಯ ವಕೀಲ ದುಷ್ಯಂತ ದವೆ ಅವರು,ಮಿಶ್ರಾಗೆ ಜಾಮೀನು ನೀಡಿರುವ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರಾತಿಗೆ ಸಂಬಂಧಿಸಿದ ತತ್ವಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಮತ್ತು ವಿಚಾರಣಾ ನ್ಯಾಯಾಲಯವು ಮಿಶ್ರಾಗೆ ಜಾಮೀನು ನಿರಾಕರಿಸುವ ಮೂಲಕ ಸರಿಯಾದ ಕ್ರಮವನ್ನೇ ಅನುಸರಿಸಿತ್ತು ಎಂದು ಹೇಳಿದರು. ಜಾಮೀನು ಆದೇಶದ ವಿರುದ್ಧ ಉ.ಪ್ರದೇಶ ಸರಕಾರವು ಯಾವುದೇ ಮೇಲ್ಮನವಿಯನ್ನು ಸಲ್ಲಿಸಿಲ್ಲ ಎಂದು ಅವರು ಬೆಟ್ಟು ಮಾಡಿದರು.
ಸದ್ಯಕ್ಕೆ ತಾನು ನೋಟಿಸನ್ನು ಹೊರಡಿಸುತ್ತೇನೆ ಮತ್ತು ಹೋಳಿ ವಿರಾಮದ ಬಳಿಕ ವಿಚಾರಣೆಯನ್ನು ನಡೆಸುತ್ತೇನೆ ಎಂದು ಸರ್ವೋಚ್ಚ ನ್ಯಾಯಾಲಯವು ತಿಳಿಸಿತು.
ಕಳೆದ ವರ್ಷದ ಅ.3ರಂದು ಲಖಿಂಪುರ ಖೇರಿಯಲ್ಲಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮೇಲೆ ಆಶಿಷ್ ಮಿಶ್ರಾಗೆ ಸೇರಿದ ಕಾರು ಒಳಗೊಂಡಂತೆ ವಾಹನಗಳ ಸಾಲು ನುಗ್ಗಿತ್ತು. ಈ ಘಟನೆಯಲ್ಲಿ ನಾಲ್ವರು ರೈತರು ಮತ್ತು ಓರ್ವ ಪತ್ರಕರ್ತ ಸಾವನ್ನಪ್ಪಿದ್ದು,
ಇತರ ಹಲವಾರು ಜನರು ಗಾಯಗೊಂಡಿದ್ದರು. ಬಳಿಕ ನಡೆದಿದ್ದ ಹಿಂಸಾಚಾರದಲ್ಲಿ ಬಿಜೆಪಿಯ ಇಬ್ಬರು ನಾಯಕರು ಮತ್ತು ವಾಹನವೊಂದರ ಚಾಲಕ ಕೊಲ್ಲಲ್ಪಟ್ಟಿದ್ದರು. ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠವು ಫೆ.10ರಂದು ಮಿಶ್ರಾಗೆ ಜಾಮೀನು ಮಂಜೂರು ಮಾಡಿತ್ತು.







