ಪ್ರಜಾಪ್ರಭುತ್ವದಲ್ಲಿ ಫೇಸ್ಬುಕ್, ಟ್ವಿಟರ್ ನ ಹಸ್ತಕ್ಷೇಪಕ್ಕೆ ಅಂತ್ಯ ಹಾಡಲು ಸರಕಾರಕ್ಕೆ ಸೋನಿಯಾ ಆಗ್ರಹ

ಹೊಸದಿಲ್ಲಿ, ಮಾ.16: ಪ್ರಜಾಪ್ರಭುತ್ವವನ್ನು ಅತಿಕ್ರಮಿಸಲು ಸಾಮಾಜಿಕ ಮಾಧ್ಯಮಗಳ ದುರುಪಯೋಗದ ಹೆಚ್ಚುತ್ತಿರುವ ಅಪಾಯದ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಕಳವಳವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು,ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ರಾಜಕೀಯದಲ್ಲಿ ಫೇಸ್ಬುಕ್ ಮತ್ತು ಇತರ ದೈತ್ಯ ಸಾಮಾಜಿಕ ಮಾಧ್ಯಮಗಳ ವ್ಯವಸ್ಥಿತ ಹಸ್ತಕ್ಷೇಪಕ್ಕೆ ಅಂತ್ಯ ಹಾಡುವಂತೆ ಸರಕಾರವನ್ನು ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು,ಫೇಸ್ಬುಕ್ ಮತ್ತು ಟ್ವಿಟರ್ನಂತಹ ಜಾಗತಿಕ ಕಂಪನಿಗಳನ್ನು ರಾಜಕೀಯ ಪಕ್ಷಗಳ ನಾಯಕರು ಮತ್ತು ಅವರ ಬದಲಿ ಪ್ರತಿನಿಧಿಗಳಿಂದ ರಾಜಕೀಯ ನಿರೂಪಣೆಯನ್ನು ರೂಪಿಸಲು ಬಳಸಲಾಗುತ್ತಿದೆ ಎಂದು ಬೆಟ್ಟು ಮಾಡಿದರು.
ಜಾಗತಿಕ ಸಾಮಾಜಿಕ ಮಾಧ್ಯಮ ಕಂಪನಿಗಳು ಎಲ್ಲ ರಾಜಕೀಯ ಪಕ್ಷಗಳಿಗೆ ಸಮಾನ ವೇದಿಕೆಯನ್ನು ಒದಗಿಸುತ್ತಿಲ್ಲ ಎನ್ನುವುದು ಪದೇಪದೇ ಸಾರ್ವಜನಿಕ ಗಮನಕ್ಕೆ ಬಂದಿದೆ ಎಂದರು.
ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಫೇಸ್ಬುಕ್ ಚುನಾವಣಾ ಜಾಹೀರಾತುಗಳಿಗಾಗಿ ‘ತನ್ನದೇ ದ್ವೇಷ ಭಾಷಣ ನಿಯಮಗಳನ್ನು ಬಗ್ಗಿಸಿ’ ಆಡಳಿತಾರೂಢ ಬಿಜೆಪಿಯ ಮುಂದೆ ಅಗ್ಗದ ಕೊಡುಗೆಗಳನ್ನು ಇರಿಸಿತ್ತು ಮತ್ತು ಸರಕಾರದ ವಿರುದ್ಧ ಮಾತನಾಡುತ್ತಿದ್ದ ಎಲ್ಲರ ಧ್ವನಿಯನ್ನು ದಮನಿಸಿತ್ತು ಎಂದು ಪ್ರತಿಪಾದಿಸಿರುವ ಅಲ್ಝಝೀರಾ ಮತ್ತು ದಿ ರಿಪೋರ್ಟ್ರ್ಸ್ ಕಲೆಕ್ಟಿವ್ ಪ್ರಕಟಿಸಿರುವ ವರದಿಯನ್ನು ಸೋನಿಯಾ ಪ್ರಸ್ತಾಪಿಸಿದರು.
ಈ ವಿಷಯವು ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದ ಅವರು,‘ಆಡಳಿತ ವ್ಯವಸ್ಥೆಯ ಶಾಮೀಲಾತಿಯೊಂದಿಗೆ ಫೇಸ್ಬುಕ್ ಸಾಮಾಜಿಕ ಸೌಹಾರ್ದವನ್ನು ಕದಡುತ್ತಿರುವ ಅಬ್ಬರದ ರೀತಿಯು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ. ಭಾವನಾತ್ಮಕವಾಗಿ ಉದ್ರೇಕಿಸುವ ತಪ್ಪು ಮಾಹಿತಿಗಳು ಮತ್ತು ಪ್ರಾಕ್ಸಿ ಜಾಹೀರಾತುಗಳ ಮೂಲಕ ಯುವಜನರು ಮತ್ತು ಹಿರಿಯರ ಮನಸ್ಸುಗಳಲ್ಲಿ ಸಮಾನವಾಗಿ ದ್ವೇಷವನ್ನು ಬಿತ್ತಲಾಗುತ್ತಿದೆ. ಫೇಸ್ಬುಕ್ನಂತಹ ಕಂಪನಿಗಳಿಗೆ ಇದರ ಅರಿವಿದೆ ಮತ್ತು ಇದರಿಂದ ಅವು ಲಾಭ ಮಾಡಿಕೊಳ್ಳುತ್ತಿವೆ. ದೊಡ್ಡ ಕಾರ್ಪೊರೇಟ್ಗಳು,ಆಡಳಿತ ವ್ಯವಸ್ಥೆ ಮತ್ತು ಫೇಸ್ಬುಕ್ನಂತಹ ಜಾಗತಿಕ ದೈತ್ಯ ಸಾಮಾಜಿಕ ಮಾಧ್ಯಮಗಳ ನಡುವೆ ಹೆಚ್ಚುತ್ತಿರುವ ಸಂಬಂಧವನ್ನು ಈ ವರದಿಗಳು ತೋರಿಸಿವೆ. ಇದು ಪಕ್ಷಪಾತದ ರಾಜಕೀಯವನ್ನು ಮೀರಿದೆ. ಯಾರೇ ಅಧಿಕಾರದಲ್ಲಿದ್ದರೂ ನಾವು ನಮ್ಮ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ರಕ್ಷಿಸುವ ಅಗತ್ಯವಿದೆ ’ ಎಂದರು.







