ಹವಾಮಾನ ವೈಪರೀತ್ಯ ಸಮಸ್ಯೆ ನಿಯಂತ್ರಿಸಲು ಬೈಸಿಕಲ್ ಗಳ ಬಳಕೆಗೆ ಪ್ರೋತ್ಸಾಹ: ವಿಶ್ವಸಂಸ್ಥೆ ನಿರ್ಣಯ

ವಿಶ್ವಸಂಸ್ಥೆ, ಮಾ.16: ಹವಾಮಾನ ವೈಪರೀತ್ಯ ಸಮಸ್ಯೆಗೆ ಪರಿಹಾರ ರೂಪಿಸುವಲ್ಲಿ ಸೈಕಲ್ಗಳ ಬಳಕೆಯನ್ನು ಉತ್ತೇಜಿಸುವ ನಿರ್ಣಯವನ್ನು 193 ಸದಸ್ಯ ದೇಶಗಳ ವಿಶ್ವಸಂಸ್ಥೆ ಮಹಾಸಭೆ ಮಂಗಳವಾರ ಅಂಗೀಕರಿಸಿದೆ.
ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಸೈಕಲ್ಗಳ ಬಳಕೆಯನ್ನು ಅಳವಡಿಸಿಕೊಳ್ಳಲು ಕರೆ ನೀಡುವ ನಿರ್ಣಯವನ್ನು ತುರ್ಕ್ಮೆನಿಸ್ತಾನ್ ಮಂಡಿಸಿದ್ದು ಸರ್ವಾನುಮತದಿಂದ ಅನುಮೋದನೆಗೊಂಡಿದೆ. ಸುಧಾರಿತ ರಸ್ತೆ ಸುರಕ್ಷಾ ಕ್ರಮದೊಂದಿಗೆ ಸೈಕಲ್ಗಳನ್ನು ಪ್ರಯಾಣದ ವ್ಯವಸ್ಥೆಯಾಗಿ ಬಳಸುವುದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುವ ಮೂಲಕ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ಅಭಿವೃದ್ಧಿ ಕಾರ್ಯತಂತ್ರದಲ್ಲಿ ಸೈಕಲ್ಗಳನ್ನು ಹಂಚಿಕೊಳ್ಳುವ(ಬಾಡಿಗೆಗೆ ನೀಡುವ ) ಸೇವೆಗಳಿಗೆ ಉತ್ತೇಜನ ನೀಡುವುದಕ್ಕೆ ವಿಶೇಷ ಗಮನ ನೀಡಬೇಕಾಗಿದೆ ಎಂದು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಲಾಗಿದೆ.
Next Story





