ಶ್ರೀಲಂಕಾ: ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ವ್ಯಾಪಕ ಪ್ರತಿಭಟನೆ
ಕೊಲಂಬೊ, ಮಾ.16: ಶ್ರೀಲಂಕಾದಲ್ಲಿ ದಶಕಗಳಲ್ಲೇ ಅತ್ಯಂತ ತೀವ್ರ ಆರ್ಥಿಕ ಬಿಕ್ಕಟ್ಟಿನ ವಿಪತ್ತು ತಲೆದೋರಿದ್ದು ಇದಕ್ಕೆ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಆಡಳಿತ ಕಾರಣ ಎಂದು ಆರೋಪಿಸಿ ಮತ್ತು ಅವರ ರಾಜೀನಾಮೆಗೆ ಆಗ್ರಹಿಸಿ ರಾಜಧಾನಿ ಕೊಲಂಬೋದಲ್ಲಿ ಬುಧವಾರ ವ್ಯಾಪಕ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.
ಪ್ರಮುಖ ವಿಪಕ್ಷ ಯುನೈಟೆಡ್ ಪೀಪಲ್ಸ್ ಫೋರ್ಸ್(ಯುಪಿಎಫ್)ನ ನೇತೃತ್ವದಲ್ಲಿ ಪ್ರತಿಭಟನಾಕಾರರು ಕೊಲಂಬೋದಲ್ಲಿ ಅಧ್ಯಕ್ಷರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ವಿಪಕ್ಷ ಮುಖಂಡ ಸಜಿತ್ ಪ್ರೇಮದಾಸ, ನೀವು ಕಳೆದ 2 ವರ್ಷದಿಂದ ತೊಂದರೆ ಅನುಭವಿಸುತ್ತಿದ್ದೀರಿ. ಇನ್ನಷ್ಟು ದಿನ ತೊಂದರೆ ಅನುಭವಿಸಬೇಕು ಎಂದು ಜನರನ್ನುದ್ದೇಶಿಸಿ ಪ್ರಶ್ನಿಸಿದರು.
ಸರಕಾರದ ತಪ್ಪು ಆಡಳಿತ ನಿರ್ವಹಣೆಯಿಂದ ಅರ್ಥವ್ಯವಸ್ಥೆ ಕುಸಿದಿದೆ, ತೈಲ, ಅಡುಗೆ ಅನಿಲ, ಹಾಲಿನ ಪುಡಿ, ಔಷಧ ಮುಂತಾದ ಅಗತ್ಯ ವಸ್ತುಗಳ ತೀವ್ರ ಕೊರತೆಯಿದೆ. ಈಗ ಆಡಳಿತದಲ್ಲಿರುವ ದುಷ್ಟ ಸರಕಾರದಿಂದ ಜನತೆ ತೀವ್ರ ತೊಂದರೆಗೆ ಸಿಲುಕಿದ್ದಾರೆ. ಇದೆಲ್ಲದರ ಹೊಣೆ ಹೊತ್ತು ಅಧ್ಯಕ್ಷ ರಾಜಪಕ್ಸ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸರಕಾರಿ ವಿರೋಧಿ ಘೋಷಣೆಯುಳ್ಳ ಫಲಕ ಹಿಡಿದಿದ್ದ ಪ್ರತಿಭಟನಾಕಾರರು, ರಾಜಪಕ್ಸ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.







