ಬಂದ್: ಬಂಟ್ವಾಳ ತಾಲೂಕಿನಲ್ಲಿ ಮುಸ್ಲಿಮ್ ವರ್ತಕರಿಂದ ಉತ್ತಮ ಸ್ಪಂದನ

ಬಂಟ್ವಾಳ, ಮಾ.17: ತರಗತಿಗಳಲ್ಲಿ ಹಿಜಾಬ್ ಧರಿಸುವ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಇಂದು ಕರ್ನಾಟಕ ಬಂದ್ ಗೆ ನೀಡಿರುವ ಕರೆಗೆ ಬಂಟ್ವಾಳ ತಾಲೂಕಿನಲ್ಲಿ ಮುಸ್ಲಿಮ್ ವರ್ತಕರಿಂದ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಮುಸ್ಲಿಮ್ ವರ್ತಕರು ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ತಮ್ಮ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ. ನಗರ ಹಾಗೂ ಗ್ರಾಮ ಪ್ರದೇಶಗಳಲ್ಲಿ ಮುಸ್ಲಿಮರ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.
ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡ್, ಮೆಲ್ಕಾರ್, ಕಲ್ಲಡ್ಕ, ಮಾಣಿ, ವಿಟ್ಲ ಭಾಗಗಳಲ್ಲಿ ಮುಸ್ಲಿಮ್ ವರ್ತಕರ ಹೊಟೇಲ್, ಜವುಳಿ ಮಳಿಗೆ, ಫ್ಯಾನ್ಸಿ, ತರಕಾರಿ, ಹಣ್ಣು ಹಂಪಲು ಸೇರಿದಂತೆ ಎಲ್ಲಾ ಅಂಗಡಿಗಳು ಬೆಳಗ್ಗೆಯಿಂದ ತೆರೆದಿಲ್ಲ. ಮಾಂಸ, ಹಸಿಮೀನು, ಒಣಮೀನು ಮಾರುಕಟ್ಟೆ ಕೂಡಾ ಬಂದ್ ಆಗಿವೆ.
ಫರಂಗಿಪೇಟೆಯ ಬಹುತೇಕ ಅಂಗಡಿ ಮುಂಗಟ್ಟುಗಲು ಬಂದ್ ಆಗಿವೆ. ಆಟೋ ರಿಕ್ಷಾ, ಟ್ಯಾಕ್ಸಿ ಗೂಡ್ಸ್ ವಾಹನ ಚಾಲಕರು ರಸ್ತೆಗಿಳಿಯದೆ ಬಂದ್ ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ತಾಲೂಕಿನ ಹಲವು ಜಮಾಅತ್ ಕಮಿಟಿಗಳು, ಮೊಹಲ್ಲಾಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿತ್ತು. ಹಾಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಬಂದ್ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ಮುಸ್ಲಿಮ್ ವಾಹನ ಚಾಲಕರು ಕೂಡಾ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ತಾಲೂಕಿನ ಕೆಲವು ಖಾಸಗಿ ಶಾಲೆಗಳು ರಜೆ ಘೋಷಿಸಿದ್ದು ಶಾಲಾ ಕಾಲೇಜುಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿದ್ದಾರೆ.