ಹಿಜಾಬ್ ತೀರ್ಪು ಹಿನ್ನೆಲೆ: ಗೊಂದಲ ಇಲ್ಲದೆ ಶಾಲಾ ಕಾಲೇಜುಗಳಲ್ಲಿ ಚಟುವಟಿಕೆ: ಶಶಿಕುಮಾರ್

ಮಂಗಳೂರು, ಮಾ.17: ಹಿಜಾಬ್ ಕುರಿತಂತೆ ನ್ಯಾಯಾಲಯದಿಂದ ತೀರ್ಪು ಪ್ರಕಟವಾದ ಬಳಿಕ ಬುಧವಾರದಿಂದ ನಗರದಲ್ಲಿ ಶಾಲಾ ಕಾಲೇಜುಗಳು ಯಾವುದೇ ಗೊಂದಲವಿಲ್ಲದೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿವೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲವು ಜಿಲ್ಲೆಗಳಲ್ಲಿ ತೀರ್ಪು ವಿರೋಧಿಸಿ ಕೆಲ ವಿದ್ಯಾರ್ಥಿಗಳು, ಸಂಘಟನೆಗಳು ಪ್ರತಿಭಟನೆ ಮಾಡಿರುವುದು, ಹಿಬಾಜ್ ಧರಿಸಿ ಬಂದು ಕಾಲೇಜು ಶಾಲೆಗಳಲ್ಲಿ ತರಗತಿ ಬಹಿಷ್ಕರಿಸಿರುವುದನ್ನು ಕಂಡಿದ್ದೇನೆ. ಆದರೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಲ್ಲೂ ಅಂತಹ ಘಟನೆ ನಡೆದಿಲ್ಲ. ಹಿಂದೆಯೂ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದಗಳು ನಡೆದ ಸಂದರ್ಭದಲ್ಲೂ ನಗರದಲ್ಲಿ ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಘಟನೆಗಳು, ಶಾಲಾ ಕಾಲೇಜು ಆಡಳಿತ ಮಂಡಳಿ, ಸಾರ್ವಜನಿಕರು, ಪೋಷಕರು, ಪಕ್ಷಗಳ ಪ್ರತಿನಿಧಿಗಳು ಶಾಂತಿಪೂರ್ವಕವಾಗಿ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕರಿಸಿದ್ದಾರೆ. ಆದೇಶ ಬಂದ ಬಳಿಕವೂ ಶಾಂತಿ ಕಾಪಾಡುವುದು, ಅಹಿತಕರ ಘಟನೆಗೆ ಅವಕಾಶ ನೀಡದ ರೀತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು, ಸಂಘಟನೆಗಳು ನಡೆದುಕೊಳ್ಳುವ ವಿಶ್ವಾಸ ನನಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.