ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ಕೂಲಂಕಷ ತನಿಖೆ: ಪೊಲೀಸ್ ಆಯುಕ್ತ ಶಶಿಕುಮಾರ್

ಮಂಗಳೂರು, ಮಾ.17: ನಗರದ ಕರಾವಳಿ ಕಾಲೇಜಿನ ವಿದ್ಯಾರ್ಥಿ, ಬೆಂಗಳೂರು ಮೂಲದ ನಿವಾಸಿ ಭರತ್ ಭಾಸ್ಕರ್ (20) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆತ್ಮಹತ್ಯೆಗೆ ಕುಮ್ಮಕ್ಕು ಎಂಬ ಬಗ್ಗೆ ಪ್ರಕರಣ ದಾಖಲಾಗಿದ್ದು, ರಾಹುಲ್ ಎಂಬ ಸಿಬ್ಬಂದಿ ಹಾಗೂ ಕಾಲೇಜಿನ ಮುಖ್ಯಸ್ಥ ಗಣೇಶ್ ರಾವ್ ಎಂಬವರ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಪ್ರಕರಣ ತನಿಖೆಯಲ್ಲಿದೆ. ಪೋಸ್ಟ್ ಮಾರ್ಟಂ ಮಾಡಿ ಮೃತದೇಹವನ್ನು ವಿದ್ಯಾರ್ಥಿಯ ಪೋಷಕರಿಗೆ ಹಸ್ತಾಂತರಿಸಲಾಗಿದೆ. ವಿದ್ಯಾರ್ಥಿ ಆತ್ಮಹತ್ಯೆಗೆ ಮುಂಚಿತವಾಗಿ ತಾಯಿಗೆ ಕಳುಹಿಸಿರುವ ವಾಟ್ಸ್ ಆ್ಯಪ್ ಸಂದೇಶ ಹಾಗೂ ಮರಣಪತ್ರವಿದ್ದು, ಬೇರೆ ಯಾವ ಕಾರಣಕ್ಕೆ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದಾನೆಂಬ ಎಂಬ ಬಗ್ಗೆ ಕೂಲಂಕುಷ ತನಿಖೆ ನಡೆಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಮೃತ ವಿದ್ಯಾರ್ಥಿ ತಾಯಿಗೆ ವಾಟ್ಸ್ ಆ್ಯಪ್ ಮೂಲಕ ತಾಯಿಗೆ ಸಂದೇಶವನ್ನು ಕಳುಹಿಸಿದ್ದು, ಅದರಲ್ಲಿ ಕಾಲೇಜಿನಲ್ಲಿ ಸರಿಯಾಗಿ ಪಾಠ ಮಾಡುತ್ತಿಲ್ಲ. ಕೋರ್ಸ್ ಕಂಪ್ಲೀಟ್ ಮಾಡಲು ತೊಂದರೆಯಾಗುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಇದೇ ವೇಳೆ ವಿದ್ಯಾರ್ಥಿ ಬರೆದಿದ್ದಾನೆನ್ನಲಾದ ಮರಣ ಪತ್ರವೊಂದು ದೊರಕಿದ್ದು, ಅದರಲ್ಲಿ ನನ್ನ ಸಾವಿಗೆ ನಾನು ಸೇರಿರುವ ಕಾಲೇಜು ಕಾರಣವಾಗಿದ್ದು, ಒಂದೂವರೆ ವರ್ಷವನ್ನು ವ್ಯರ್ಥವಾಗಿ ಕಳೆದಿದ್ದೇನೆ. ಸೂಕ್ತ ಸಿಬ್ಬಂದಿಯಿಲ್ಲ, ಸರಿಯಾಗಿ ತರಗತಿಗಳು ನಡೆಯುತ್ತಿಲ್ಲ.. ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದಾರೆ. ನನ್ನ ಸಾವಿಗೆ ಕಾಲೇಜು ಕಾರಣ. ಇತರ ವಿದ್ಯಾರ್ಥಿಗಳಿಗೆ ಈ ರೀತಿಯ ಮೋಸವಾಗಬಾರದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.