ಸವಣೂರು ಸೀತಾರಾಮ ರೈಗೆ ʼಸಹಕಾರಿ ರತ್ನ' ಪ್ರಶಸ್ತಿ

ಸೀತಾರಾಮ ರೈ
ಪುತ್ತೂರು: ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಸಹಕಾರಿ ರತ್ನ ಪ್ರಶಸ್ತಿಗೆ ಪುತ್ತೂರಿನ ಸವಣೂರಿನ ಶಿಲ್ಪಿ ಎಂದೇ ಖ್ಯಾತರಾಗಿರುವ ವಿದ್ಯಾರಶ್ಮಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಚಾಲಕ ಹಾಗು ಹಿರಿಯ ಸಹಕಾರಿ ಧುರೀಣ, ಆದರ್ಶ ವಿವಿದೋದ್ಧೇಸ ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಅವರು ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರಧಾನ ಸಮಾರಂಭವು ಮಾ.20ರಂದು ಬೆಂಗಳೂರಿನ ಕೆಂಗೇರಿ ಉಪನಗರದ 1ನೇ ಮುಖ್ಯ ರಸ್ತೆಯ ಗಣೇಶ ಮೈದಾನದಲ್ಲಿ ನಡೆಯಲಿದೆ. ಸಿಎಂ ಬಸವರಾಜ ಎಸ್ ಬೊಮ್ಮಾಯಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ರಾಜ್ಯ ಸಹಕಾರ ಚಳುವಳಿಯ ಬೆಳವಣಿಗೆಗೆ ಸೀತಾರಾಮ ರೈ ಅವರು ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಸಹಕಾರಿ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ತಿಳಿಸಿದೆ.
ಗ್ರಾಮೀಣ ಪ್ರದೇಶವಾಗಿರುವ ಸವಣೂರಿನ ವಿದ್ಯಾರಶ್ಮಿ ಸಮೂಹ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸವಣೂರು ಸೀತಾರಾಮ ರೈ ಅವರು ಸಹಕಾರಿ ಸಂಸ್ಥೆಯಯಾಗಿರುವ ಕೆಎಂಎಫ್ನ ನಿರ್ದೇಶಕರಾಗಿ, ಮಾಸ್ನ ನಿರ್ದೇಶಕರಾಗಿ, ಶ್ರೀ ರಾಮಕೃಷ್ಣ ಸೊಸೈಟಿ ಮಂಗಳೂರು ಇದರ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ಈ ಹಿಂದೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಲ್ಲಿ 10 ವರ್ಷಗಳ ಕಾಲ ನಿರ್ದೇಶಕಾರಿ, 6 ವರ್ಷ ಉಪಾಧ್ಯಕ್ಷರಾಗಿ, ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಲ್ಲಿ 18 ವರ್ಷಗಳ ಕಾಲ ನಿರ್ದೇಶಕಾರಿ, ಎರಡೂವರೆ ವರ್ಷ ಅಧ್ಯಕ್ಷರಾಗಿ, ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿಯಲ್ಲಿ 5 ವರ್ಷಗಳ ಕಾಲ ನಿರ್ದೇಶಕರಾಗಿ, ಸವಣೂರು ಹಾಲು ಉತ್ಪಾದಕರ ಸಂಘದ ಸ್ಥಾಪಕ ಅಧ್ಯಕ್ಷರಾಗಿ, 15 ವರ್ಷಗಳ ಕಾಲ ಅಧ್ಯಕ್ಷರಾಗಿ, ಬಳಿಕ 5 ವರ್ಷಗಳ ಕಾಲ ನಿದೇಶಕರಾಗಿ. ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕರಾಗಿ 6 ವರ್ಷ, ಟಿಎಪಿಸಿಎಂಎಸ್ ನಿರ್ದೇಶಕರಾಗಿ 10 ವರ್ಷ, ಸೇವೆ ಸಲ್ಲಿಸಿದ್ದರು.