ಹೈಕೋರ್ಟ್ ತೀರ್ಪಿನಿಂದ ಶಿಕ್ಷಣದ ಹಕ್ಕಿಗೆ ಹೊಡೆತ: ದ.ಕ.ಜಿಲ್ಲಾ ಸಿಪಿಎಂ
ಮಂಗಳೂರು : ಹಿಜಾಬ್‌ಗೆ ಸಂಬಂಧಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪು ದುರದೃಷ್ಟಕರ. ಇದು ಸಾರ್ವತ್ರಿಕ ಶಿಕ್ಷಣ ಪಡೆಯುವ ಹಕ್ಕಿಗೆ ಹೊಡೆತ ನೀಡಲಿದೆ ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ತನ್ನ ಆತಂಕವನ್ನು ವ್ಯಕಪಡಿಸಿದೆ.
ಎಲ್ಲರಿಗೂ ಶಿಕ್ಷಣ ಪಡೆಯುವ ಹಕ್ಕನ್ನು ಸಂವಿಧಾನವು ಖಾತರಿಪಡಿಸಿದೆ. ಮಂಗಳವಾರ ಪ್ರಕಟಿಸಿದ ರಾಜ್ಯ ಹೈಕೋರ್ಟ್‌ನ ತೀರ್ಪಿನಲ್ಲಿ ಹಲವು ಪ್ರಶ್ನಾರ್ಹ ಆಯಾಮಗಳಿವೆ. ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ರಾಜ್ಯ ಸರಕಾರದ ದೋಷಪೂರ್ಣವಾದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರಿಂದ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.
ಭಾರತದ ಹಲವಾರು ರಾಜ್ಯಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರವನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದೂ ಸಾಮಾನ್ಯ ಸಮವಸ್ತ್ರದ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ನೆರೆಯ ಕೇರಳ, ಅಲ್ಲಿನ ಶಾಲೆಗಳಲ್ಲಿ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿರುವ ದಾಖಲೆಯನ್ನು ಕಾಣಬಹುದಾಗಿದೆ. ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದರೆ ಉತ್ತಮವಾಗಿತ್ತು ಎಂದು ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.