ಮಾ.19: ನಿಂತಿಕಲ್‍ನಲ್ಲಿ ಎಸ್‍ಸಿಡಿಸಿಸಿ ಬ್ಯಾಂಕಿನ 109ನೇ ಶಾಖೆ ಉದ್ಘಾಟನೆ
ಮಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಯನ್ನು ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 109ನೇ ನೂತನ ಶಾಖೆಯು ಸುಳ್ಯ ತಾಲೂಕಿನ ನಿಂತಿಕಲ್‍ನಲ್ಲಿ ಮಾರ್ಚ್ 19ರಂದು ಪೂರ್ವಾಹ್ನ 10.30 ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಮುರುಳ್ಯ ಗ್ರಾಮದ ನಿಂತಿಕಲ್ ಜಂಕ್ಷನ್ ಹತ್ತಿರವಿರುವ `ಧರ್ಮಶ್ರೀ ಆರ್ಕೇಡ್' ಕಟ್ಟಡದ ಪ್ರಥಮ ಅಂತಸ್ತಿನಲ್ಲಿ ಕಾರ್ಯಾರಂಭಗೊಳ್ಳುವ ಈ ಶಾಖೆಯನ್ನು ಸಚಿವರಾದ ಎಸ್. ಅಂಗಾರ ಅವರು ಉದ್ಘಾಟಿಸಲಿರುವರು. ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಪ್ರಜ್ವಲನೆ ಮಾಡಲಿರುವರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಇವರು ವಹಿಸಲಿರುವರು. ಗಣಕೀಕರಣದ ಉದ್ಘಾಟನೆಯನ್ನು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ ಅಧ್ಯಕ್ಷರಾದ ವಸಂತ ಗೌಡ ಹುದೇರಿ, ಭದ್ರತಾ ಕೋಶದ ಉದ್ಘಾಟನೆಯನ್ನು ಮುರುಳ್ಯ ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಜಾನಕೀ ಮುರುಳ್ಯ ಇವರು ನೆರವೇರಿಸಲಿರುವರು. ಕಟ್ಟಡ ಮಾಲಕರಾದ ಎಂ. ಮಾಧವ ಗೌಡ ಇವರು ಸಮಾರಂಭದಲ್ಲಿ ಉಪಸ್ಥಿತಿ ಇರುವರು.
ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು, ಕೋರ್ ಬ್ಯಾಂಕಿಂಗ್ ಹಾಗೂ ಏಕಗವಾಕ್ಷಿ ಸೌಲಭ್ಯದ ಜೊತೆಗೆ ಆರ್‍ಟಿಜಿಎಸ್ / ನೆಫ್ಟ್ ಸೌಲಭ್ಯವು ಈ ಶಾಖೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.