"ಹುಕ್ಕಾ ಬಾರ್ ಗೆ ನೀವು ಯಾಕೆ ಹೋಗಿದ್ದೀರಿ?": ಪ್ರತಿಪಕ್ಷ ಸದಸ್ಯನನ್ನು ಪ್ರಶ್ನಿಸಿದ ಮುಖ್ಯಮಂತ್ರಿ, ಸಚಿವರು

ಬೆಂಗಳೂರು, ಮಾ.17: ಹುಕ್ಕಾ ಬಾರ್ ಗೆ ನೀವು ಏಕೆ ಹೋಗಿದ್ದೀರಿ, ಅಲ್ಲಿ ನಿಮಗೇನು ಕೆಲಸ ಎಂದು ಪ್ರತಿಪಕ್ಷ ಸದಸ್ಯನನ್ನು ಮುಖ್ಯಮಂತ್ರಿ, ಸಚಿವರು ಪ್ರಶ್ನೆ ಮಾಡಿದ ಪ್ರಸಂಗ ಜರುಗಿತು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಹುಕ್ಕಾ ಬಾರ್ ನಲ್ಲಿ ವಿವಿಧ ಚಟುವಟಿಕೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸದಸ್ಯ ಟಿ.ಆರ್.ರಮೇಶ್ ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿ, ಹುಕ್ಕಾ ಬಾರ್ ಒಂದು ರೀತಿಯ ಸ್ಮೋಕಿಂಗ್ ಝೋನ್ ಇದ್ದಂತೆ. ಇದನ್ನು ನಡೆಸುವವರಿಗೆ ಅನಗತ್ಯವಾಗಿ ತೊಂದರೆ ಕೊಡಬಾರದು ಎಂದು ನ್ಯಾಯಾಲಯದ ಆದೇಶವೂ ಇದೆ. ಆದರೆ, ಇತ್ತೀಚೆಗೆ ಹುಕ್ಕಾ ಬಾರ್ ನಡೆಸುವವರ ಬಗ್ಗೆ ಅನುಮಾನ ಬಂದು ಸಿಸಿಬಿ ದಾಳಿ ನಡೆಸಲಾಗಿತ್ತು. ಅದರಲ್ಲಿ ಕೆಲವು ವಸ್ತುಗಳು ಸಿಕ್ಕಿವೆ. ಅದನ್ನು ಎಫ್‍ಎಸ್‍ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಬಂದ ಬಳಿಕ ತಪ್ಪಿತ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅದನ್ನು ಬಿಟ್ಟು ಬೇರೆ ಯಾವ ಚಟುವಟಿಕೆಯೂ ನಡೆಯುತ್ತಿಲ್ಲ ಎಂದು ಹೇಳಿದರು.
ಆಗ ರಮೇಶ್ ಮಧ್ಯ ಪ್ರವೇಶಿಸಿ, ಎಲ್ಲೆಲ್ಲಿ ಏನೇನೂ ನಡೆಯುತ್ತಿದೆ ಎಂಬುದನ್ನು ನಾನು ತೋರಿಸುತ್ತೇನೆ ಎಂದು ಸವಾಲು ಹಾಕಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ರಮೇಶ್ ನಿಮಗೇನು ಗೊತ್ತು, ನೀವು ಏಕೆ ಹೋಗಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪೂರಕವಾಗಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಹ, ಹುಕ್ಕಾ ಬಾರ್‍ಗೆ ನೀವು ಯಾಕೆ ಹೋಗಿದ್ದೀರಿ ಎಂದು ಕೇಳಿದರು. ಬಳಿಕ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ರಮೇಶ್ ಒಳ್ಳೆಯವರು, ಹುಕ್ಕಾ ಬಾರ್ ಗಳಿಗೆ ಹೋಗುವುದಿಲ್ಲ. ಬೆಂಗಳೂರಿನ ಮೇಯರ್ ಆಗಿ ಕೆಲಸ ಮಾಡಿದವರು. ಹುಕ್ಕಾ ಬಾರ್ ಗಳಿಗೆ ಅನುಮತಿ ನೀಡುವುದೇ ಮಹಾನಗರ ಪಾಲಿಕೆ. ಹೀಗಾಗಿ ಅವರಿಗೆ ಎಲ್ಲೆಲ್ಲಿ ಏನೇನೂ ನಡೆಯುತ್ತಿದೆ ಎನ್ನುವುದು ಗೊತ್ತಿದೆ ಎಂದು ಧ್ವನಿಗೂಡಿಸಿದರು.
ಮತ್ತೆ ಮಾತು ಮುಂದುವರೆಸಿದ ರಮೇಶ್, ಹುಕ್ಕಾ ಬಾರ್ ನಲ್ಲಿ ಕ್ಯಾಸಿನೋ, ಕ್ಯಾಬರೆ ನಡೆಯುತ್ತಿದೆ. ಬೇಕಾದರೆ ನನ್ನ ಜತೆ ಬನ್ನಿ ತೋರಿಸುತ್ತೇನೆ ಎಂದು ಗೃಹ ಸಚಿವರನ್ನು ಪ್ರಶ್ನಿಸಿದರು.
ಆಗ ಮಧ್ಯ ಪ್ರವೇಶಿಸಿದ ಗೃಹ ಸಚಿವರು, ಉಪ್ಪಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದ ಬಗ್ಗೆ ದೂರುಗಳು ಬಂದಿದ್ದವು. ದಾಳಿ ಮಾಡಿ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದರು.







