ಸುಪ್ರೀಂ ತೀರ್ಪು ಹೊರಬರುವವರೆಗೆ ಶಿಕ್ಷಣ ಪಡೆಯಲು ಅವಕಾಶ ನೀಡಿ: ಬಿ.ಟಿ. ಲಲಿತಾ ನಾಯಕ್

ಬೆಂಗಳೂರು, ಮಾ.17: ಹಿಜಾಬ್ ವಿವಾದವು ಸುಪ್ರಿಂ ಅಂಗಳದಲ್ಲಿರುವ ಕಾರಣ ತೀರ್ಪು ಬರುವವರೆಗೂ ರಾಜ್ಯ ಸರಕಾರವು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕು. ವಿದ್ಯಾರ್ಥಿನಿಯರ ಭವಿಷ್ಯದ ಹಿತದೃಷ್ಟಿಯಿಂದ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಜನತಾ ಪಾರ್ಟಿಯ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್ ಮನವಿ ಮಾಡಿದ್ದಾರೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಹಿಜಾಬ್ ಧಾರ್ಮಿಕ ಅಂಶವಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ. ಇದನ್ನು ಪ್ರಶ್ನಿಸಿ ಹಿಜಾಬ್ ಮುಸಲ್ಮಾನರ ಧಾರ್ಮಿಕ ಅಂಶ ಸಮರ್ಥಿಸಲು ಸುಪ್ರಿಂ ಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೆ, ಶಾಲಾ ಮಕ್ಕಳ ಬುರ್ಕಾ ಬಿಟ್ಟು ಹಿಜಾಬ್ ಧರಿಸಿಕೊಂಡು ಶಾಲೆಗೆ ಬರುತ್ತಾರೆ. ಹಾಗಾಗಿ ಅವರು ಸಮವಸ್ತ್ರವನ್ನು ನಿರಾಕರಿಸುತ್ತಿಲ್ಲ. ಸರಕಾರವು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳು ಇದನ್ನು ಪರಿಶೀಲಿಸಿ, ಸುಪ್ರೀಂ ಕೋರ್ಟ್‍ನಿಂದ ತೀರ್ಪು ಹೊರ ಬರುವವರೆಗೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂದು ಹೇಳಿದರು.
ಸಣ್ಣ ವಿವಾದವನ್ನು ನ್ಯಾಯಾಲಯದಲ್ಲಿ ಚರ್ಚಿಸುವಂತೆ ಮಾಡಿದ್ದಾರೆ. ಹಿಜಾಬ್‍ಗೆ ಪ್ರತಿಯಾಗಿ ಶಾಲಾ ಮಕ್ಕಳಿಗೆ ಕೇಸರಿ ಶಾಲನ್ನು ಹಂಚಿದ್ದಾರೆ. ಹಿಜಾಬ್ ಶತಮಾನಗಳಿಂದ ಧರಿಸುತ್ತಿದ್ದಾರೆ. ಮುಂದೆಯೂ ಧರಿಸುತ್ತಾರೆ. ಆದರೆ ಕೇಸರಿ ಶಾಲನ್ನು ಎಷ್ಟು ದಿನಗಳ ಕಾಲ ಧರಿಸುತ್ತಾರೆ ಎಂದು ಪ್ರಶ್ನಿಸಿದ ಅವರು, ಹಿಜಾಬ್ ಧರಿಸಿದರೆ, ಯಾರಿಗೆ ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ಕ್ಷುಲ್ಲಕ ವಿವಾದವನ್ನು ಗಂಬೀರ ಪರಿಸ್ಥಿತಿಗೆ ತೆಗೆದುಕೊಂಡು ಹೋದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಇಂತಿಯಾಜ್ ಎ ಅತ್ತಾರ್, ಪಾಲಾಕ್ಷಪ್ಪ, ರಫೀಕ್, ವೀರಭದ್ರೇಗೌಡ, ಮಹಮ್ಮದ್ ರೌಫ್, ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.







