ಎಸಿಬಿ ಹೆಸರಿನಲ್ಲಿ ಅಧಿಕಾರಿಗಳಿಗೆ ವಂಚನೆ: ಆರೋಪಿಗಳ ಬಂಧನ

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸರಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿರುವರ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಕೆಲ ದುಷ್ಕರ್ಮಿಗಳು ಸರಕಾರಿ ಅಧಿಕಾರಿಗಳ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಂಡು ತಮಗೆ ಎಸಿಬಿ ಉನ್ನತಾಧಿಕಾರಿಗಳು ಪರಿಚಯವಿದ್ದು ಏನಾದರೂ ಕೆಲಸ ಆಗಬೇಕಿದಲ್ಲಿ ಮಾಡಿಕೊಡುವುದಾಗಿ ತಿಳಿಸಿ ಸರಕಾರಿ ಅಧಿಕಾರಿಗಳನ್ನು ಬೆದರಿಸಿ ಅವರಿಂದ ಹಣ ವಸೂಲಿ ಮಾಡುವ ಬಗ್ಗೆ ಕೆಲ ಸರಕಾರಿ ಅಧಿಕಾರಿಗಳು ಎಸಿಬಿಗೆ ಮಾಹಿತಿ ನೀಡಿದ್ದಾರೆ.
ಇದರನ್ವಯ ಬಿಡಿಎ ಕಚೇರಿಯ ಸಿಬ್ಬಂದಿ ಚೇತನ್ ಎಂಬುವವನ ಮುಖಾಂತರ ಪ್ರವೀಣ್ ಮತ್ತು ಮನೋಜ್ ಕುಮಾರ್ ಎಂಬುವವರು ಪರಿಚಯವಾಗಿ ತಮಗೆ ವಿಜಯ್ ಕುಮಾರ್ ಎಂಬುವವರು ಪರಿಚಯವಿದ್ದು ಅವರಿಗೆ ಎಸಿಬಿಯಲ್ಲಿ ಪರಿಚಯವಿರುವ ಉನ್ನತಾಧಿಕಾರಿಗಳ ಮುಖಾಂತರ ನಿಮಗೆ ಏನೂ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಹೇಳಿ ಲಕ್ಷಾಂತರ ರೂ.ಗಳನ್ನು ಬಲವಂತವಾಗಿ ವಸೂಲಿ ಮಾಡಿದ್ದಾರೆ.
ಈ ಬಗ್ಗೆ ಸರಕಾರಿ ಅಧಿಕಾರಿಯೊಬ್ಬರು ತಮ್ಮಿಂದ ಮತ್ತು ತಮಗೆ ಪರಿಚಿತರಿರುವ ಕೆಲವು ಅಧಿಕಾರಿಗಳಿಂದ 10 ಲಕ್ಷ ರೂ. ಹಣವನ್ನು ಬಲವಂತವಾಗಿ ಪಡೆದಿರುತ್ತಾರೆಂದು ಎಸಿಬಿಗೆ ನೀಡಿರುವ ಮಾಹಿತಿ ನೀಡಿದ ಬೆನ್ನಲ್ಲೇ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವಿಜಯ್ ಕುಮಾರ್, ಪ್ರವೀಣ್, ಚೇತನ್, ಮನೋಜ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಎಸಿಬಿ ತಿಳಿಸಿದೆ.
ಅದೇ ರೀತಿ, ಮತ್ತೊಂದು ಪ್ರಕರಣದಲ್ಲಿ ಕೆಐಎಡಿಬಿಯ ಅಧಿಕಾರಿಯೊಬ್ಬರಿಂದ 1.5 ಲಕ್ಷ ರೂ. ವಸೂಲಿ ಮಾಡಿರುವ ಆರೋಪ ಸಂಬಂಧ ಧರ್ಮೇಂದ್ರ ಎಂಬಾತನನ್ನು ಬಂಧಿಸಿ, ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಪ್ರಕಟನೆ ಹೇಳಿದೆ.







