ಇಮಾರತ್ ಎ ಶರೀಅ ಕರೆ ನೀಡಿದ್ದ ಕರ್ನಾಟಕ ಬಂದ್ ಶಾಂತಿಯುತ

ಬೆಂಗಳೂರು, ಮಾ.17: ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ಹೈಕೋರ್ಟ್ ನೀಡಿರುವ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಇಮಾರತ್ ಎ ಶರೀಅ ಗುರುವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಶಾಂತಯುತವಾಗಿ ಅಂತ್ಯಗೊಂಡಿದೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಮುಸ್ಲಿಮ್ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಯವರೆಗೆ ಬಂದ್ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಇಮಾರತ್ ಎ ಶರೀಅ ಮೊದಲೆ ಸೂಚಿಸಿದಂತೆ ಬಂದ್ ಸಂದರ್ಭದಲ್ಲಿ ಯಾವುದೆ ರೀತಿಯ ರ್ಯಾಲಿ, ಬಹಿರಂಗ ಪ್ರತಿಭಟನೆ, ಸಮಾವೇಶಗಳು, ಪರ ವಿರೋಧ ಘೋಷಣೆಗಳಿಗೆ ಎಲ್ಲಿಯೂ ಆಸ್ಪದ ನೀಡದೆ ಬಂದ್ ಮಾಡಲಾಯಿತು.
ಬೆಂಗಳೂರು, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಗುಲ್ಬರ್ಗಾ, ರಾಯಚೂರು, ಬಿಜಾಪುರ, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ, ದಾವಣಗೆರೆ, ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮುಸ್ಲಿಮರು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿದ್ದರು.
ಕೃತಜ್ಞತೆಗಳು: ರಾಜ್ಯದ ಎಲ್ಲ ಮುಸ್ಲಿಮರು ಹಾಗೂ ನ್ಯಾಯದ ಪರವಾಗಿರುವ ಅನ್ಯ ಧರ್ಮೀಯ ಸಹೋದರರು ಈ ಬಂದ್ ಯಶಸ್ವಿಯಾಗಲು ಕಾರಣಕರ್ತರಾಗಿದ್ದಾರೆ. ಅವರೆಲ್ಲರಿಗೂ ಇಮಾರತ್ ಎ ಶರೀಅ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ರಶಾದಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಮಾರತ್ ಎ ಶರೀಅ, ಜಮೀಯತ್ ಉಲಮಾ, ಜಮಾಅತೆ ಇಸ್ಲಾಮಿ ಹಿಂದ್, ಜಮೀಯತ್ ಅಹ್ಲೆ ಹದೀಸ್, ಜಮಾಅತ್ ಅಹ್ಲೆ ಸುನ್ನತ್ ಕರ್ನಾಟಕ, ಜಾಮಿಯಾ ಹಝ್ರತ್ ಅಹ್ಲೆ ಸುನ್ನತ್ ಉಲ್ ಜಮಾತ್, ಅಂಜುಮನ್ ಎ ಇಸ್ಲಾಮ್, ಕರ್ನಾಟಕ ಮುಸ್ಲಿಮ್ ಮುತ್ತಹಿದ ಮಹಝ್, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್, ಸದಾಯೇ ಇತ್ತೇಹಾದ್, ಗಲ್ರ್ಸ್ ಇಸ್ಲಾಮಿ ಆರ್ಗನೈಝೇಷನ್ ಆಫ್ ಕರ್ನಾಟಕ, ಫಾವರ್ಡ್ ಟ್ರಸ್ಟ್ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಸಂಘ, ಸಂಸ್ಥೆಗಳ ಸಹಮತಿಯೊಂದಿಗೆ ಈ ಬಂದ್ ನಡೆಸಲು ತೀರ್ಮಾನಿಸಲಾಯಿತು ಎಂದು ಹೇಳಿದ್ದಾರೆ.
ಅತ್ಯಂತ ಕಡಿಮೆ ಸಮಯದಲ್ಲಿ ಬಂದ್ ಮಾಡುವ ಘೋಷಣೆ ಮಾಡಿದ್ದರೂ ಕೇವಲ ಜಿಲ್ಲಾ ಮಟ್ಟದಲ್ಲಷ್ಟೇ ಅಲ್ಲ, ತಾಲೂಕು, ಹೋಬಳಿ ಹಾಗೂ ಗ್ರಾಮಗಳ ಮಟ್ಟದಲ್ಲಿಯೂ ಬಂದ್ ಯಶಸ್ವಿಯಾಗಿದೆ. ಈ ಬಂದ್ ಕೇವಲ ಯಶಸ್ವಿಯಷ್ಟೇ ಅಲ್ಲ, ಒಂದು ರೀತಿಯಲ್ಲಿ ಮಾದರಿಯಾದ ಬಂದ್ ಆಗಿದೆ ಎಂದು ಸಗೀರ್ ಅಹ್ಮದ್ ರಶಾದಿ ತಿಳಿಸಿದ್ದಾರೆ.
ಇದಕ್ಕಾಗಿ ಪ್ರತಿಯೊಬ್ಬರಿಗೂ ನಾವು ಧನ್ಯವಾದಗಳನ್ನು ಸಲ್ಲಿಸುತ್ತೇವೆ. ರಾಜ್ಯದಲ್ಲಿ ಯಾವುದೆ ಬಗೆಯ ಅಹಿತಕರ ಘಟನೆಗಳು ನಡೆಯದಂತೆ, ಶಾಂತಿಯುತವಾಗಿ ಎಲ್ಲವು ನೆರವೇರಿರುವುದಕ್ಕಾಗಿ ಎಲ್ಲ ವರ್ತಕರು, ಶಿಕ್ಷಣ ಸಂಸ್ಥೆಗಳ ಪ್ರಮುಖರು, ಮಸೀದಿಗಳ ಪದಾಧಿಕಾರಿಗಳು ಹಾಗೂ ಪ್ರಮುಖವಾಗಿ ಪೊಲೀಸ್ ಆಯುಕ್ತರು, ಅಧಿಕಾರಿಗಳಿಗೆ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಈಗಾಗಲೆ, ನಮ್ಮ ಪ್ರತಿಭಟನೆಯನ್ನು ಸಲ್ಲಿಸಿದ್ದೇವೆ. ಈ ವಿಚಾರದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅದರಲ್ಲಿಯೂ ತಾವು ಇದೇ ರೀತಿ ನಮಗೆ ಬೆಂಬಲವಾಗಿ ನಿಲ್ಲುತ್ತೀರಾ ಎಂಬ ವಿಶ್ವಾಸವಿದೆ ಎಂದು ಅಮೀರೆ ಶರೀಅತ್ ತಿಳಿಸಿದ್ದಾರೆ.
ಶಾಂತಿಯುತ ಬಂದ್: ಕಮಲ್ ಪಂತ್
ಹಿಜಾಬ್ ತೀರ್ಪು ಸಂಬಂಧ ಮುಸ್ಲಿಮ್ ಸಂಘನಟೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆ ನಗರಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಬಂದ್ ಶಾಂತಿಯುತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಗರಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದೆ. ಬಂದ್ ಹಿನ್ನೆಲೆ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಶಾಂತಿಯುತವಾಗಿ ಬಂದ್ ನಡೆಸಿದ್ದಾರೆ ಎಂದರು.
ಇಲ್ಲಿನ ಶಿವಾಜಿನಗರ, ಫ್ರೇಜರ್‍ಟೌನ್, ಕಮರ್ಷಿಯಲ್ ಸ್ಟ್ರೀಟ್, ಟ್ಯಾನರಿ ರಸ್ತೆ, ಮೆಜಸ್ಟಿಕ್, ಮಾರ್ಕೆಟ್ ಹಾಗೂ ಬಂಬೂ ಬಜಾರ್ ಎಲ್ಲವೂ ಬಂದ್ ಆಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದ್ದಾರೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪೊಲೀಸರು ನಿಗಾವಹಿಸಿದ್ದರು ಎಂದು ತಿಳಿಸಿದರು.







