ಲಂಚ ಸ್ವೀಕಾರ ಆರೋಪ ಪ್ರಕರಣ: ರವಿ ಡಿ.ಚೆನ್ನಣ್ಣನವರ್ ಪಾತ್ರವಿಲ್ಲ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮಾ.17: ಇಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ ಕ್ರಷರ್ ಮಾಲಕರಿಂದ ಲಂಚ ಸ್ವೀಕಾರ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರವಿ ಡಿ.ಚೆನ್ನಣ್ಣನವರ್ ಭಾಗಿಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಗುರುವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಅವರು, ಐಪಿಎಸ್ ಅಧಿಕಾರಿಯ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈ ಸಂಬಂಧ ಪೊಲೀಸ್ ಮಹಾ ನಿರೀಕ್ಷಕರು (ಐಜಿಪಿ) ತನಿಖೆ ನಡೆಸಿದ್ದರು. ಅದರಲ್ಲಿ ರವಿ ಡಿ.ಚನ್ನಣ್ಣನವರ್ ಪಾತ್ರ ಇಲ್ಲ ಎನ್ನುವುದು ತಿಳಿದು ಬಂದಿದೆ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಠಾಣಾ ವ್ಯಾಪ್ತಿಯ ಕ್ರಷರ್ ಮಾಲಕರಿಂದ 55 ಲಕ್ಷಕ್ಕೂ ಹೆಚ್ಚು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ದಾಖಲಾಗಿಲ್ಲ. ಆದರೆ ಅತ್ತಿಬೆಲೆ ನಗರದ ಆರ್.ಮಂಜುನಾಥ್ ಎನ್ನುವವರು ಕೇಂದ್ರ ವಲಯದ ಐಜಿಪಿಗೆ ದೂರು ನೀಡಿ ವಿಜಯಪುರ ಸರ್ಕಲ್ ಇನ್‍ಸ್ಪೆಕ್ಟರ್ ಪಿ. ಶ್ರೀನಿವಾಸ್, ಎಎಸ್ಸೈಗಳಾದ ಎನ್.ಶುಭಾ ಮತ್ತು ಕೆ.ಜಿ. ಅನಿತಾ ವಿರುದ್ದ ದೂರು ನೀಡಿದ್ದರು ಎಂದು ಹೇಳಿದರು.
ದೂರು ಆಧರಿಸಿ ತನಿಖೆ ಮಾಡಿದಾಗ ಮೇಲ್ನೋಟಕ್ಕೆ ಲಂಚ ಪಡೆದಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಸರ್ಕಲ್ ಇನ್‍ಸ್ಪೆಕ್ಟರ್ ಶ್ರೀನಿವಾಸ್ ಅವರನ್ನು ಅಮಾನತ್ತು ಮಾಡಿ ಎಎಸ್ಸೈಗಳಾದ ಶುಭಾ ಮತ್ತು ಅನಿತಾ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.







