ಪರಿಶಿಷ್ಟ ಪಂಗಡದ ಜನಾಂಗದವರಿಗೆ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರ: ಕಾಂಗ್ರೆಸ್ ಧರಣಿ, ಸದನ ಮುಂದೂಡಿಕೆ
ಬೆಂಗಳೂರು, ಮಾ.17: ರಾಜ್ಯದಲ್ಲಿನ ಎಸ್ಟಿ ಜನಾಂಗದವರಿಗೆ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹಸ್ ದಾಸ್ ನೀಡಿರುವ ಜಾರಿಗೊಳಿಸುವಂತೆ ಕಾಂಗ್ರೆಸ್ ಸದಸ್ಯರು ಗುರುವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ಮೇರೆಗೆ ಪ್ರಸ್ತಾಪಿಸಿದ ವಿಷಯಕ್ಕೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ನೀಡಿದ ಉತ್ತರವನ್ನು ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಪರಿಶಿಷ್ಟ ಪಂಗಡದ ಜನಾಂಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಸಮಾಜದ ಗುರುಗಳು ಫ್ರೀಡಂ ಪಾರ್ಕ್‍ನಲ್ಲಿ ಮುಷ್ಕರ ಮಾಡುತ್ತಿದ್ದಾರೆ. ಅದನ್ನು ವಾಪಸ್ ಪಡೆಯಬೇಕೆಂದು ನಾನು ಮನವಿ ಮಾಡುತ್ತೇನೆ. ಜನಾಂಗಕ್ಕೆ ಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ನಾನು ಈ ಹಿಂದೆ ನೀಡಿರುವ ಹೇಳಿಕೆಗೆ ಬದ್ಧವಾಗಿದ್ದೇನೆ, ನನ್ನ ನಿಲುವಿನಲ್ಲಿ ಯಾವುದೆ ಬದಲಾವಣೆ ಇಲ್ಲ ಎಂದು ಶ್ರೀರಾಮುಲು ಹೇಳಿದರು.
ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡಿ ಎಂಬುದು ಶಾಸಕರ ಒತ್ತಾಯವಾಗಿದೆ. ನಾಗಮೋಹನ್ ದಾಸ್ ವರದಿಯನ್ನು ಪರಿಶೀಲಿಸುತ್ತಿರುವ ನ್ಯಾ.ಸುಭಾಷ್ ಅಡಿ ಅವರಿಗೆ ಆದಷ್ಟು ಶೀಘ್ರ ವರದಿ ನೀಡುವಂತೆ ನಾನು ವಿನಂತಿ ಮಾಡುತ್ತೇನೆ ಎಂದು ಅವರು ಹೇಳಿದರು.
ಅಲ್ಲದೆ, ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಇಲಾಖೆಯವರ ಜೊತೆಯೂ ಚರ್ಚೆ ಮಾಡುತ್ತೇನೆ. ಬೇರೆ ಬೇರೆ ಜನಾಂಗದವರು ಎಸ್ಟಿ ಹಾಗೂ 2ಎಗೆ ಸೇರ್ಪಡೆಯಾಗಲು ಬೇಡಿಕೆ ಮುಂದಿಟ್ಟಿದ್ದಾರೆ. ಆದುದರಿಂದ, ವಿಳಂಬ ಆಗುತ್ತಿದೆ. ನಾನು ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರದ ಕುರಿತು ವರದಿ ನೀಡುವಂತೆ ಅವರಿಗೆ ಮನವಿ ಮಾಡುತ್ತೇನೆ ಎಂದು ಶ್ರೀರಾಮುಲು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ರಘುಮೂರ್ತಿ, ತುಕಾರಾಮ ಸೇರಿದಂತೆ ಇನ್ನಿತರರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ವೇಳೆ ಕೆಲ ಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಮೀಸಲಾತಿ ಹೆಚ್ಚಿಸುವಂತೆ ಕೇಳುವುದು ಆ ವರ್ಗದ ಸಾಂವಿಧಾನಿಕ ಹಕ್ಕು. ಸರಕಾರ ಅವರಿಗೆ ಭರವಸೆ ನೀಡಿ ಅವರ ಮತಗಳನ್ನು ಪಡೆದುಕೊಂಡು ಈಗ ಅವರಿಗೆ ವಂಚಿಸುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಕಿಡಿಗಾರಿದರು.
ಸದನದಲ್ಲಿ ಗದ್ದಲದ ವಾತಾವರಣ ಮುಂದುವರೆದಿದ್ದರಿಂದ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ನಾಳೆ ಬೆಳಗ್ಗೆ 10.30ಕ್ಕೆ ಸೇರುವಂತೆ ಮುಂದೂಡಿದರು.







