ರಾಜ್ಯದಲ್ಲಿ ಮೂರನೇ ಒಂದರಷ್ಟು ಹುದ್ದೆಗಳು ಖಾಲಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ 7.6 ಲಕ್ಷ ಹುದ್ದೆಗಳ ಪೈಕಿ ಶೇಕಡ 33ರಷ್ಟು ಹುದ್ದೆಗಳು ಖಾಲಿ ಬಿದ್ದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನೇಮಕಾತಿ ಪ್ರಕ್ರಿಯೆಗೆ ಅಡ್ಡಿ ಉಂಟಾಗಿದ್ದು ಇದಕ್ಕೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಇರುವುದು 38 ಇಲಾಖೆಗಳ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂದು ಅವರು ವಿಧಾನ ಪರಿಷತ್ತಿನಲ್ಲಿ ಕೆ.ಟಿ.ಶ್ರೀಕಾಂತೇಗೌಡ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಉದ್ಯೋಗಿಗಳ ಮೇಲೆ ಹೆಚ್ಚಿರುವ ಕೆಲಸದ ಒತ್ತಡದ ಅರಿವು ಸರ್ಕಾರಕ್ಕೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.
"ನೇರ ನೇಮಕಾತಿಗಾಗಿ ಇಲಾಖೆಗಳ ಮುಖ್ಯಸ್ಥರು ಹಣಕಾಸು ಇಲಾಖೆಯ ಅನುಮತಿ ಕೋರಿದ್ದಾರೆ. ಪ್ರತಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಹಣಕಾಸು ಇಲಾಖೆ, ಅಗತ್ಯಕ್ಕೆ ತಕ್ಕಂತೆ ಖಾಲಿ ಹುದ್ದೆಗಳ ಭರ್ತಿಗೆ ಅನುಮತಿ ನೀಡಲಿದೆ. ಇಲಾಖೆಗಳು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿವೆ. ಇತರ ಸಂಸ್ಥೆಗಳು ಹಣಕಾಸು ಇಲಾಖೆಯ ಅನುಮತಿಯೊಂದಿಗೆ ಹುದ್ದೆ ಭರ್ತಿ ಮಾಡಿಕೊಳ್ಳಲಿವೆ ಎಂದು ಹೇಳಿದರು.
ಪೂರ್ಣಾವಧಿ ಉದ್ಯೋಗಿಗಳ ನೇಮಕದ ವರೆಗೆ ಸರ್ಕಾರ ಸಿಬ್ಬಂದಿ ನಿಯೋಜನೆ, ಹೊರಗುತ್ತಿಗೆ ಮತ್ತು ಹೆಚ್ಚುವರಿ ಸಂಪನ್ಮೂಲ ನಿಯೋಜನೆ ಮೂಲಕ ಪರಿಸ್ಥಿತಿ ನಿಭಾಯಿಸಲಿದೆ ಎಂದು ವಿವರಿಸಿದರು. 2015ರಿಂದಲೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕ ಆಗಿಲ್ಲ ಎಂಬ ಬಗ್ಗೆ ಗಮನ ಸೆಳೆದಾಗ, ಶಿಕ್ಷಕರ ನೇಮಕಾತಿಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.







