ಮಾರಿಪೂಜೆ ವೇಳೆ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನೀಡಬೇಡಿ: ಕಾಪು ಪುರಸಭಾ ಮುಖ್ಯಾಧಿಕಾರಿಗೆ ಹೀಗೊಂದು ಮನವಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮನವಿಯ ಪ್ರತಿ
ಕಾಪು, ಮಾ.18: ಕಾಪುವಿನ ಮೂರು ಮಾರಿಗುಡಿಗಳಲ್ಲಿ ಮಾ.22 ಮತ್ತು 23ರಂದು ನಡೆಯುವ ಸುಗ್ಗಿ ಮಾರಿ ಪೂಜೆಯ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ನೀಡಬಾರದು ಎಂದು ಕಾಪು ಪುರಸಭಾ ಮುಖ್ಯಾಧಿಕಾರಿಗೆ ಹಿಂದೂ ಕಾರ್ಯಕರ್ತರೆನ್ನುವ ಹೆಸರಿನಲ್ಲಿ ಸಲ್ಲಿಸಿರುವ ಮನವಿ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೂ ಕಾರ್ಯಕರ್ತರು, ಕಾಪು ತಾಲೂಕು ಎಂಬ ಹೆಸರಿನಲ್ಲಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈ ತಿಂಗಳು ನಡೆಯುವ ಮಾರಿ ಪೂಜೆಯಲ್ಲಿ ಯಾವುದೇ ಮುಸ್ಲಿಮ್ ಸಮುದಾಯದವರಿಗೆ ಅಂಗಡಿ/ಸ್ಟಾಲ್ಗಳನ್ನು ನಡೆಸಲು ಅವಕಾಶ ನೀಡಬಾರದು. ಒಂದು ವೇಳೆ ಮುಸ್ಲಿಮ್ ಸಮುದಾಯದವರಿಗೆ ಅಂಗಡಿ/ ಸ್ಟಾಲ್ಗಳನ್ನು ನಡೆಸಲು ಅವಕಾಶ ಕೊಟ್ಟರೆ ಅದರಿಂದ ಉಂಟಾಗುವ ಯಾವುದೇ ತೊಂದರೆ ಅಥವಾ ಅನಾಹುತಗಳಿಗೆ ನೀವೇ ಜವಾಬ್ದಾರರು ಎಂದು ಪುರಸಭಾ ಮುಖ್ಯಾಧಿಕಾರಿಗೆ ಎಚ್ಚರಿಸಲಾಗಿದೆ.
ಈ ಮನವಿ ಕುರಿತಂತೆ ಪ್ರತಿಕ್ರಿಯಿಸಿರುವ ಪುರಸಭಾ ಅಧಿಕಾರಿ ವೆಂಕಟೇಶ್ ನಾವುಡ, "ಮೂರು ಮಾರಿಗುಡಿಗಳಲ್ಲಿ ಮಾ.22 ಮತ್ತು 23ರಂದು ನಡೆಯುವ ಸುಗ್ಗಿ ಮಾರಿ ಪೂಜೆಯ ವೇಳೆ ಮುಸ್ಲಿಮ್ ಸಮುದಾಯದವರಿಗೆ ಅಂಗಡಿ ನಡೆಸಲು ಅವಕಾಶ ನೀಡಬಾರದೆಂದು 'ಹಿಂದೂ ಕಾರ್ಯಕರ್ತರು' ಎಂಬ ಹೆಸರಿನಲ್ಲಿ ಮನವಿಯೊಂದು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮನವಿದಾರರಿಗೆ ಹೇಳಿದ್ದೇವೆ. ಭಾರತ ಜಾತ್ಯತೀತ ರಾಷ್ಟ್ರ ಆಗಿರುವುದರಿಂದ ಮಾರಿಪೂಜೆಯ ವೇಳೆ ಎಲ್ಲರಿಗೂ ವ್ಯಾಪಾರ ಮಾಡಲು ಅವಕಾಶವಿದೆ" ಎಂದು ತಿಳಿಸಿದ್ದಾರೆ.







