ಇಂದು ಸೋನಿಯಾ ಗಾಂಧಿ-ಗುಲಾಂ ನಬಿ ಆಝಾದ್ ಭೇಟಿ ಸಾಧ್ಯತೆ

ಹೊಸದಿಲ್ಲಿ,ಮಾ.18: ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ನ ಹೀನಾಯ ಸೋಲಿನ ಬಗ್ಗೆ ಜಿ23 ಅಥವಾ ಭಿನ್ನಮತೀಯರ ಗುಂಪು ಸರಣಿ ಸಭೆಗಳಲ್ಲಿ ಚರ್ಚಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಭಿನ್ನಮತೀಯ ನಾಯಕರಲ್ಲೋರ್ವರಾಗಿರುವ ಗುಲಾಂ ನಬಿ ಆಝಾದ್ ಅವರನ್ನು ಶುಕ್ರವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಝಾದ್,ಅದು ಕಾಂಗ್ರೆಸ್ ಅಧ್ಯಕ್ಷೆಯ ಜೊತೆ ಉತ್ತಮ ಭೇಟಿಯಾಗಿತ್ತು. ಅದು ನಿಮಗೆ ಸುದ್ದಿಯಾಗಿರಬಹುದು,ಆದರೆ ಅದು ಪಕ್ಷಾಧ್ಯಕ್ಷೆಯ ಜೊತೆ ಎಂದಿನ ಮಾಮೂಲು ಭೇಟಿಯಾಗಿತ್ತು ಎಂದು ಹೇಳಿದರು. ಪಕ್ಷದಲ್ಲಿ ಭ್ರಮನಿರಸನವಾಗಿದೆ ಎಂಬ ವರದಿಗಳನ್ನು ಅವರು ಕಡೆಗಣಿಸಿದರು.
‘ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಗಳಿಗಾಗಿ ಹೇಗೆ ಒಗ್ಗಟ್ಟಿನಿಂದ ಸಜ್ಜಾಗಬಹುದು ಎಂಬ ಬಗ್ಗೆ ನಾವು ಚರ್ಚಿಸಿದೆವು. ನಾಯಕತ್ವದ ಬಗ್ಗೆ ಯಾವುದೇ ಪ್ರಶ್ನೆಯಿರಲಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲುಸಿ)ಯನ್ನು ತೊರೆಯುವಂತೆ ಯಾರೊಬ್ಬರೂ ಸೋನಿಯಾರಿಗೆ ಕೇಳಿಲ್ಲ ’ ಎಂದರು.
ರವಿವಾರ ನಡೆದಿದ್ದ ಸಿಡಬ್ಲುಸಿ ಸಭೆಯಲ್ಲಿ ಗಾಂಧಿ ಕುಟುಂಬದ ನಿಷ್ಠರ ನಿಲುವಿನಿಂದ ಅಸಮಾಧಾನಗೊಂಡಿರುವ ಭಿನ್ನಮತೀಯರು ಬುಧವಾರದಿಂದ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಸರಣಿ ಸೋಲುಗಳನ್ನು ಅನುಭವಿದ್ದರೂ ಪಕ್ಷಕ್ಕೆ ಗಾಂಧಿಗಳ ನಾಯಕತ್ವವನ್ನು ಈ ನಿಷ್ಠರು ಪ್ರತಿಪಾದಿಸಿದ್ದಾರೆ.
ಸರಣಿ ಸೋಲುಗಳ ಬಳಿಕ 2020ರಲ್ಲಿ ಸೋನಿಯಾ ಗಾಂಧಿಯವರಿಗೆ ಮೊದಲ ಬಾರಿ ಪತ್ರ ಬರೆದಾಗಿನಿಂದ ಜಿ23 ಪಕ್ಷದ ಪುನರ್ರಚನೆಗಾಗಿ ನಿರಂತರವಾಗಿ ಒತ್ತಾಯಿಸುತ್ತಿದೆ. ಇತ್ತೀಚಿನ ಚುನಾವಣೆಗಳಲ್ಲಿ ಪಂಜಾಬಿನಲ್ಲಿ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಉ.ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಅಕ್ಷರಶಃ ಧೂಳೀಪಟಗೊಂಡಿದೆ.
ಆಝಾದ್ ಜೊತೆ ಸೋನಿಯಾ ಭೇಟಿಯು ಜಿ23 ಗುಂಪನ್ನು ತಲುಪಲು ಗಾಂಧಿ ಕುಟುಂಬದ ಪ್ರಯತ್ನವೆಂದು ನೋಡಲಾಗಿದೆ.
ಈ ಮೊದಲು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಿ23 ಗುಂಪಿನ ಇನ್ನೋರ್ವ ನಾಯಕ ಭೂಪಿಂದರ್ ಸಿಂಗ್ ಹೂಡಾರನ್ನು ಭೇಟಿಯಾಗಿದ್ದರು.







