ಉಪ್ಪಿನಂಗಡಿ ಪಪೂ ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಣೆ

ಉಪ್ಪಿನಂಗಡಿ, ಮಾ.18: ಹಿಜಾಬ್ ಧಾರಿ ವಿದ್ಯಾರ್ಥಿನಿಯರಿಗೆ ತರಗತಿ ಪ್ರವೇಶ ನಿರ್ಬಂಧಿಸಿದ ಕಾರಣ ಪರೀಕ್ಷೆ ಬರೆಯಲಾಗದೆ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆದ ಘಟನೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದಿದೆ.
ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಕೆಲ ವಿದ್ಯಾರ್ಥಿನಿಯರು ಶುಕ್ರವಾರ ಹಿಜಾಬ್ ಧರಿಸಿ ತರಗತಿಯೊಳಗೆ ಪ್ರವೇಶಿಸಲು ಮುಂದಾದಾಗ, ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಉಪನ್ಯಾಸಕರು ಅವಕಾಶ ನೀಡಲಿಲ್ಲ. ಈ ವೇಳೆ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣದಲ್ಲಿ ನಿಂತು ಆಕ್ರೋಶ ವ್ಯಕ್ತಪಡಿಸಿದರು. ಇವರಿಗೆ ಬೆಂಬಲವಾಗಿ ತರಗತಿಯೊಳಗಿದ್ದ ಕೆಲವು ವಿದ್ಯಾರ್ಥಿಗಳೂ ತರಗತಿ ಬಹಿಷ್ಕರಿಸಿ ಅವರೊಂದಿಗೆ ಸೇರಿಕೊಂಡರು.
ಹಿಜಾಬ್ ತೆಗೆದು ತರಗತಿಯೊಳಗೆ ಬಂದು ಪರೀಕ್ಷೆ ಬರೆಯುವಂತೆ ಉಪನ್ಯಾಸಕರು ತಿಳಿಸಿದಾಗ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿದರು. ಬಳಿಕ ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಫ ಕೆಂಪಿ, ಗ್ರಾಪಂ ಸದಸ್ಯರಾದ ಯು.ಟಿ.ಮುಹಮ್ಮದ್ ತೌಸೀಫ್, ಅಬ್ದುರ್ರಶೀದ್ ಹಾಗೂ ಕೆಲ ಮಕ್ಕಳ ಪೋಷಕರು ಕಾಲೇಜಿಗೆ ಆಗಮಿಸಿ, ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದರು.
ಆಗ ಪ್ರಾಂಶುಪಾಲ ಸುಧೀರ್ ಕುಮಾರ್ ಎಂ., ಹೈಕೋರ್ಟ್ ತೀರ್ಪು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ತೀರ್ಮಾನವನ್ನು ಅವರಿಗೆ ತಿಳಿಸಿ ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿಕೊಂಡವರಿಗೆ ತರಗತಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದರು.
ಬಳಿಕ ಹೊರಗೆ ಬಂದ ಅವರು, ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಹಿಜಾಬ್ ಪರ ನಾವು ಕೂಡಾ ಇದ್ದೇವೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಚೆಂಡು ಈಗ ಸುಪ್ರೀಂಕೋರ್ಟ್‌ನ ಅಂಗಳದಲ್ಲಿದೆ. ಆದ್ದರಿಂದ ಇಲ್ಲಿ ಹೋರಾಟ ಮಾಡಿ ಪ್ರಯೋಜನವಿಲ್ಲ ಎಂದರಲ್ಲದೆ, ನಿಮ್ಮ ಶೈಕ್ಷಣಿಕ ಭವಿಷ್ಯಕ್ಕಾಗಿ ಕಾಲೇಜಿನ ತೀರ್ಮಾನಕ್ಕೆ ಒಪ್ಪಿ ನೀವು ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯುವಂತೆ ಮನವಿ ಮಾಡಿದರು.
ಆದರೆ ವಿದ್ಯಾರ್ಥಿಗಳು ಅದಕ್ಕೆ ಸಮ್ಮತಿಸಲಿಲ್ಲ. ಈ ವೇಳೆ ಮುಸ್ಲಿಮ್ ಮುಖಂಡರು, ತರಗತಿ ಪ್ರವೇಶಿಸುವುದಿಲ್ಲವಾದರೆ ಮನೆಗೆ ತೆರಳಿ. ಪರೀಕ್ಷೆ ನಡೆಯುತ್ತಿರುವುದರಿಂದ ಉಳಿದ ವಿದ್ಯಾರ್ಥಿಗಳಿಗೆ ತೊಂದರೆಯುಂಟು ಮಾಡುವುದು ಸರಿಯಲ್ಲ ಹಿಜಾಬ್ ಅವಕಾಶಕ್ಕಾಗಿ ಎಲ್ಲಿ ಹೋರಾಟ ಮಾಡಬೇಕೋ ಅಲ್ಲಿಯೇ ಹೋರಾಟ ಮಾಡೋಣ ಎಂದರು. ಈ ಮಾತಿಗೆ ಒಪ್ಪಿದ ವಿದ್ಯಾರ್ಥಿಗಳು ಕಾಲೇಜಿನಿಂದ ಮನೆಗೆ ನಿರ್ಗಮಿಸಿದರು.