ಎಸ್ಟಿ ಮೀಸಲಾತಿ ಹೆಚ್ಚಳ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಿರ್ಧಾರ: ಸಚಿವ ಮಾಧುಸ್ವಾಮಿ ಭರವಸೆ

ಬೆಂಗಳೂರು, ಮಾ. 18: ‘ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ಸಂಬಂಧ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿ ಅನುಷ್ಠಾನಗೊಳಿಸುವ ಬೇಡಿಕೆ ಈಡೇರಿಸುವ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮುಖಂಡರ ಸಭೆ ನಡೆಸಿ ಸೂಕ್ತ ತೀರ್ಮಾನ ಮಾಡಲಾಗುವುದು' ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ನಿನ್ನೆಯಿಂದ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ಸದಸ್ಯರು ಇಂದು ತಮ್ಮ ಹೋರಾಟ ಮುಂದುವರಿಸಿದರು. ಆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ‘ಮಾ.23ರ ಬುಧವಾರ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ವಿಪಕ್ಷ ನಾಯಕರು ಸೇರಿದಂತೆ ಮುಖಂಡರ ಸಭೆ ಕರೆದು ತೀರ್ಮಾನ ಮಾಡಲಾಗುವುದು. ಹೀಗಾಗಿ ಕಾಂಗ್ರೆಸ್ ಪಕ್ಷದ ಸದಸ್ಯರು ತಮ್ಮ ಧರಣಿ ಹಿಂಪಡೆದು ಅಲ್ಲಿಯವರೆಗೆ ಸರಕಾರಕ್ಕೆ ಕಾಲಾವಕಾಶ ನೀಡಬೇಕು' ಎಂದು ಮನವಿ ಮಾಡಿದರು.
ಆರಂಭಕ್ಕೆ ಮಾತನಾಡಿದ ಕಾಂಗ್ರೆಸ್ ಸದಸ್ಯರಾದ ಇ.ತುಕಾರಾಂ, ಪ್ರಿಯಾಂಕ್ ಖರ್ಗೆ, ರಘುಮೂರ್ತಿ, ಅನಿಲ್ ಚಿಕ್ಕಮಾಧು ಸೇರಿದಂತೆ ಇನ್ನಿತರ ಸದಸ್ಯರು, ‘ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಹಲವು ಬಾರಿ ಆಗ್ರಹಿಸಿದರೂ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ' ಹೀಗಾಗಿ ಮೀಸಲಾತಿ ಹೆಚ್ಚಿಸುವ ಕುರಿತು ಸರಕಾರ ಸ್ಪಷ್ಟ ಉತ್ತರ ನೀಡಬೇಕು' ಎಂದು ಆಗ್ರಹಿಸಿದರು.
‘ನಿಮ್ಮ ಬೇಡಿಕೆಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಬುಧವಾರ ಸಭೆ ನಡೆಸಿ ತೀರ್ಮಾನಿಸುವ ಭರವಸೆ ನೀಡಿದ್ದು, ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಹಿಂಪಡೆದು ತಮ್ಮ ಸ್ಥಾನಕ್ಕೆ ತೆರಳಿ, ಪ್ರಶ್ನೋತ್ತರ ಕಲಾಪ ನಡೆಸಲು ಅನುವು ಮಾಡಿಕೊಡಬೇಕು' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು. ಸರಕಾರದ ಉತ್ತರ ಹಾಗೂ ಸ್ಪೀಕರ್ ಸೂಚನೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ ಹಿಂಪಡೆದು ತಮ್ಮ ಆಸನಗಳಿಗೆ ಮರಳಿದರು.







