ರೈತರ ಕಬ್ಬು ಮಾರಾಟಕ್ಕೆ ಆ್ಯಪ್ ಅಭಿವೃದ್ಧಿ: ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್

ಕಲಬುರಗಿ, ಮಾ.18: ಕಲಬುರಗಿ ಜಿಲ್ಲೆಯಲ್ಲಿ ಬೆಳೆಯಲಾಗುವ ಕಬ್ಬು ಸಕಾಲದಲ್ಲಿ ಮತ್ತು ಎಲ್ಲಾ ರೈತರ ಕಬ್ಬು ಮಾರಾಟವಾಗುವಂತೆ ದೀರ್ಘಾವಧಿಯ ವ್ಯವಸ್ಥೆಯಾಗಿ ಜಿಲ್ಲಾಡಳಿತದಿಂದ ವಿನೂತನವಾಗಿ ಆ್ಯಪ್ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಹೇಳಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಬ್ಬು ಖರೀದಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಪ್ರಯತ್ನಕ್ಕೆ ಮುಂದಾಗಿದ್ದೇವೆ. ಮೂರು ತಿಂಗಳಲ್ಲಿ ಆ್ಯಪ್ ಅಭಿವೃದ್ಧಿಪಡಿಸಿ ಮುಂದಿನ ವರ್ಷದಿಂದ ಇದನ್ನು ಜಾರಿಗೆ ತರಲಾಗುವುದು ಎಂದರು.
ರೈತರು ಆ್ಯಪ್‍ನಲ್ಲಿಯೇ ತಮ್ಮ ಜಮೀನಿನ ಸರ್ವೇ ಸಂಖ್ಯೆ ಜೊತೆಗೆ ಕಬ್ಬು ಕಟಾವಿಗೆ ವೈಯಕ್ತಿಕ ವಿವರದೊಂದಿಗೆ ಮನವಿ ಸಲ್ಲಿಸಬೇಕು. ಈ ಮಾಹಿತಿ ಸಕ್ಕರೆ ಕಾರ್ಖಾನೆ ಮತ್ತು ಜಿಲ್ಲಾಡಳಿತಕ್ಕೆ ಏಕಕಾಲದಲ್ಲಿ ರವಾನೆಯಾಗಲಿದೆ. ಅದರಂತೆ ಸಕ್ಕರೆ ಕಾರ್ಖಾನೆಯವರು ಕ್ಷೇತ್ರಕ್ಕೆ ಹೋಗಿ ಕಟಾವು ಮಾಡಿಕೊಳ್ಳುತ್ತಾರೆ. ಈ ರೀತಿಯ ತಂತ್ರಾಂಶ ಕಾರ್ಯನಿರ್ವಹಿಸಲಿದ್ದು, ಇದರ ಮೇಲೆ ಜಿಲ್ಲಾಡಳಿತ ನಿಗಾ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಕಟಾವಿಗೆ ದಿನಾಂಕ ನಿಗದಿ, ಪ್ರಾಯೋಗಿಕ ಜಾರಿ: ಪ್ರಸ್ತುತ ಕಲಬುರಗಿ ಜಿಲ್ಲೆಯಲ್ಲಿ ಆಳಂದ ತಾಲೂಕಿನ ಭೂಸನೂರ ಎನ್.ಎಸ್.ಎಲ್ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಬಾಕಿ ಉಳಿದಂತಹ 4,239 ಎಕರೆ ಪ್ರದೇಶದಲ್ಲಿ ಬೆಳೆಯಲಾದ ಕಬ್ಬನ್ನು ಕಟಾವು ಮಾಡಲು ಗ್ರಾಮವಾರು ದಿನಾಂಕ ನಿಗದಿ ಮಾಡಿದೆ. ಎಪ್ರಿಲ್ 10 ರೊಳಗೆ ಕಾರ್ಖಾನೆ ವ್ಯಾಪ್ತಿಯ ಎಲ್ಲಾ ಕಬ್ಬು ಕಟಾವು ಮಾಡುವಂತೆ ಪ್ರಾಯೋಗಿಕ ಯೋಜನೆಯಾಗಿ ಎನ್.ಎಸ್.ಎಲ್. ಕಾರ್ಖಾನೆಯ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಜಾರಿಗೆ ತರಲಾಗುತ್ತಿದೆ. ಇದು ಯಶಕಂಡಲ್ಲಿ ಮುಂದಿನ ದಿನದಲ್ಲಿ ಜಿಲ್ಲೆಯ ಇತರೆ ಸಕ್ಕರ ಕಾರ್ಖಾನೆ ವ್ಯಾಪ್ತಿಯಲ್ಲಿಯೂ ಜಾರಿಗೆ ತರಲಾಗುವುದು ಎಂದು ಯಶವಂತ ವಿ. ಗುರುಕರ್ ತಿಳಿಸಿದರು.
ನಿಂಬರ್ಗಾ ವಿಭಾಗದಲ್ಲಿ 550 ಎಕರೆ, ಆಳಂದ ವಿಭಾಗದಲ್ಲಿ 410 ಎಕರೆ, ಕಲಬುರಗಿ ವಿಭಾಗದಲ್ಲಿ 1205 ಎಕರೆ, ಚೌಡಾಪೂರ ವಿಭಾಗದಲ್ಲಿ 1458 ಎಕರೆ, ಅಫಜಲಪೂರ ವಿಭಾಗದಲ್ಲಿ 184 ಎಕರೆ, ಕರಜಗಿ ವಿಭಾಗದಲ್ಲಿ 130 ಎಕರೆ ಹಾಗೂ ಕಡಗಂಚಿ ವಿಭಾಗದಲ್ಲಿ 302 ಸೇರಿ ಒಟ್ಟು 4239 ಎಕರೆ ಪ್ರದೇಶಗಳಿಂದ ಅಂದಾಜು 1,24,768 ಮೆಟ್ರಿಕ್ ಟನ್ ಬಾಕಿ ಕಬ್ಬು ಕಟಾವು ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.







