ಮೇ 21, 22ರಂದು ಶಿಕ್ಷಕರ ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ: ಸಚಿವ ಬಿ.ಸಿ.ನಾಗೇಶ್
15 ಸಾವಿರ ಶಿಕ್ಷಕರ ನೇಮಕ ► ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ

ಬೆಂಗಳೂರು, ಮಾ.18: ರಾಜ್ಯದಲ್ಲಿ 15 ಸಾವಿರ ಶಿಕ್ಷಕರ(6ರಿಂದ 8ನೆ ತರಗತಿ) ನೇಮಕಾತಿಯಲ್ಲಿ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಯು ಮೇ 21 ಮತ್ತು 22ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಶುಕ್ರವಾರ ನಗರದ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 15 ಸಾವಿರ ಶಿಕ್ಷಕರ ನೇಮಕಾತಿ ಸಂಬಂಧ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಮಾ.23 ರಿಂದ ಎ.22ರ ವರೆಗೆ ಅರ್ಜಿ ಸಲ್ಲಿಕೆ ಅವಕಾಶವಿದೆ. ಆರರಿಂದ ಎಂಟು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ತಿಳಿಸಿದರು.
ಬಿಎಡ್, ಟಿಇಟಿ ಮಾಡಿದ ಎಂಜಿನಿಯರ್ ವಿದ್ಯಾರ್ಥಿಗಳಿಗೂ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಸಿಬಿಝಡ್, ಪಿಸಿಎಂ ಕಾಂಬಿನೇಷನ್ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ ಎಂದು ತಿಳಿಸಿದರು.
ಸಾಂಕ್ರಾಮಿಕ ಕೋವಿಡ್ ಕಾರಣಕ್ಕೆ ಈ ಸಲ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ವಯಸ್ಸಿನ ಮಿತಿ ಎರಡು ವರ್ಷ ಹೆಚ್ಚಳ ಮಾಡಲಾಗಿದೆ. ಎಸ್ಸಿ, ಎಸ್ಟಿ, ಪ್ರವರ್ಗ 1-47 ವರ್ಷ. ಒಬಿಸಿ-45, ಸಾಮಾನ್ಯ ವರ್ಗ–42 ಎಂದು ಹೇಳಿದರು.
6 ರಿಂದ 8ನೆ ತರಗತಿ ನೇಮಕಾತಿ ಪ್ರಕ್ರಿಯೆಗೆ ಸರಕಾರ ಚಾಲನೆ ನೀಡಿದ್ದು, ನೇಮಕಕ್ಕೆ ಮಾ.21ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಅಲ್ಲದೆ, ಪರೀಕ್ಷೆಗೆ ಮೂರು ಪತ್ರಿಕೆಗಳು ಇರುತ್ತದೆ. ಮೊದಲ ಮತ್ತು ಎರಡನೆ ಪತ್ರಿಕೆ ತಲಾ 150 ಅಂಕಗಳು, ಮೂರನೆ ಪತ್ರಿಕೆ ನೂರು ಅಂಕ ಇರುತ್ತದೆ. ಎರಡನೆ ಪತ್ರಿಕೆ ಅರ್ಹತಾ ಅಂಕಗಳನ್ನು 50 ರಿಂದ 45ಕ್ಕೆ ಮತ್ತು ಮೂರನೆ ಪತ್ರಿಕೆ 60ರಿಂದ 50ಕ್ಕೆ ಇಳಿಕೆ ಮಾಡಲಾಗಿದೆ ಎಂದರು.
ನೇಮಕಾತಿಯಲ್ಲಿ ನಾಲ್ಕು ವಿಷಯಗಳ ಹುದ್ದೆಗಳಿಗೆ ಅಂದರೆ ಆಂಗ್ಲಭಾಷೆ, ಗಣಿತ ಮತ್ತು ವಿಜ್ಞಾನ-ಜೀವವಿಜ್ಞಾನ (ಮಕ್ಕಳ ಮತ್ತು ಶಿಕ್ಷಕರ ಅನುಪಾತಕ್ಕನುಗುಣವಾಗಿ ಎರಡನೇ ಹುದ್ದೆ) ಮತ್ತು ಸಮಾಜ ಪಾಠಗಳು ಶಿಕ್ಷಕರ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಗಣಿತ ವಿಷಯದಲ್ಲಿ 21,000 ಶಿಕ್ಷಕರ ಹುದ್ದೆ ಖಾಲಿ ಇವೆ. ಎರಡು ಸಲ ಈ ಹುದ್ದೆಗೆ ಕರೆದಾಗಲೂ 600 ಹುದ್ದೆ ಮಾತ್ರ ಭರ್ತಿಯಾಗಿವೆ ಎಂದು ತಿಳಿಸಿದರು.
ರಾಜ್ಯದ ಸರಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾಗಿದೆ. ಶಿಕ್ಷಣದ ಬುನಾದಿ ಆಗಿರುವ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳಾಗಿ ಕಾರ್ಯನಿರ್ವಹಿಸುವ ಶಿಕ್ಷಕರ ಗುಣಮಟ್ಟ ಅತ್ಯಂತ ನಿರ್ಣಾಯಕ ಪಾತ್ರವಹಿಸಲಿದೆ ಎಂದರು.







