ರಾಜ್ಯಾದ್ಯಂತ ಶಾಲಾ ತರಗತಿಗಳಲ್ಲಿ ‘ಭಗವದ್ಗೀತೆ’ ಬೋಧಿಸಲು ಚಿಂತನೆ: ಸಚಿವ ಬಿ.ಸಿ.ನಾಗೇಶ್

ಸಚಿವ ಬಿ.ಸಿ.ನಾಗೇಶ್
ಬೆಂಗಳೂರು: ಗುಜರಾತ್ ರಾಜ್ಯ ಸರಕಾರವು ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಈ ಬಗ್ಗೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ.
ಗುಜರಾತ್ನಲ್ಲಿ 2022-23ನೆ ಶೈಕ್ಷಣಿಕ ಸಾಲಿನಿಂದ 6 ರಿಂದ 12ನೇ ತರಗತಿಯವರೆಗೆ ಭಗವದ್ಗೀತೆಯನ್ನು ಪಠ್ಯಕ್ರಮದ ಭಾಗವಾಗಿ ಬೋಧಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ. ನಮ್ಮ ರಾಜ್ಯದಲ್ಲಿಯೂ ಈ ಪ್ರಸ್ತಾವನೆ ಆರಂಭಿಕ ಹಂತದಲ್ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಪಠ್ಯಪುಸ್ತಕಗಳ ಸಮಿತಿ ಹಾಗೂ ಶಿಕ್ಷಣ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಸರಕಾರ ಆದೇಶಿಸಿದರೆ ಶಾಲೆಗಳ ಪಠ್ಯಕ್ರಮದಲ್ಲಿ ನೀತಿ ಬೋಧನೆಯ ಪಾಠ ಅಳವಡಿಸಲಾಗುವುದು ಎಂದರು.
ಭಗವದ್ಗೀತೆಯನ್ನು ಮಕ್ಕಳಿಗೆ ಹೇಳಿಕೊಡಬಾರದು ಅಂತೇನೂ ಇಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಭಗವದ್ಗೀತೆ ಓದುತ್ತಿದ್ದೇನೆ. ಅದೇ ನನಗೆ ಸ್ಪೂರ್ತಿ ಅಂತಾ ಹೇಳುತ್ತಿದ್ದರು. ರಾಮಾಯಣ, ಮಹಾಭಾರತ, ಬೈಬಲ್, ಕುರ್ ಆನ್ ಎಲ್ಲದರಲ್ಲೂ ಇರುವ ಒಳ್ಳೆಯ ಅಂಶಗಳನ್ನು ಪಠ್ಯದಲ್ಲಿ ಸೇರಿಸಬಹುದು. ಆದರೆ ಇದನ್ನೆಲ್ಲ ಶಿಕ್ಷಣ ತಜ್ಞರು ನಿರ್ಧಾರ ಮಾಡುತ್ತಾರೆ ಎಂದು ನಾಗೇಶ್ ಹೇಳಿದರು.
ಮಕ್ಕಳ ಸಂಸ್ಕಾರದ ಮೇಲೆ ಭಾರಿ ದೊಡ್ಡ ಪರಿಣಾಮಗಳು ಆಗುತ್ತಿವೆ. ಇದಕ್ಕಾಗಿ ನೀತಿ ಶಿಕ್ಷಣ ಪ್ರಾರಂಭ ಮಾಡಿ ಎಂಬುದು ಅನೇಕರ ಒತ್ತಾಯವಾಗಿದೆ. ಗುಜರಾತ್ನಲ್ಲಿ ಎರಡು, ಮೂರು ಹಂತದಲ್ಲಿ ನೀತಿ ಶಿಕ್ಷಣ ಆರಂಭಿಸಲು ಯೋಜನೆ ಮಾಡಿದ್ದಾರೆ. ಇದರಲ್ಲಿ ಮೊದಲ ಹಂತವಾಗಿ ಭಗವದ್ಗೀತೆ ಆರಂಭಿಸಲು ಯೋಚಿಸಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯದಲ್ಲಿಯೂ ಮಕ್ಕಳಿಗೆ ನೀತಿ ಶಿಕ್ಷಣ ಬೋಧಿಸುವ ಸಂಬಂಧ ಖಂಡಿತಾ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡುತ್ತೇವೆ. ಈ ಹಿಂದೆ ನಾವು ಓದುವ ಸಂದರ್ಭದಲ್ಲಿ ವಾರಕ್ಕೆ ಒಂದು ದಿನ ನೀತಿ ಶಿಕ್ಷಣ ಪಾಠ ಕೇಳುತ್ತಿದ್ದೆವು. ಅದೇ ರೀತಿ, ಈಗ ಮಕ್ಕಳಿಗೆ ನೀತಿ ಶಿಕ್ಷಣ ಪಾಠ ಮಾಡುವ ಬಗ್ಗೆ ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ನಾಗೇಶ್ ಹೇಳಿದರು.
ಇದನ್ನೂ ಓದಿ: 6 ರಿಂದ 12 ನೇ ತರಗತಿವರೆಗಿನ ಪಠ್ಯಕ್ರಮದಲ್ಲಿ ಭಗವದ್ಗೀತೆ ಪರಿಚಯ: ಗುಜರಾತ್ ಶಿಕ್ಷಣ ಸಚಿವ







