ಶಿವಮೊಗ್ಗ: ಜಾತ್ರೆಯಲ್ಲಿ ಹಿಂದೂಗಳಿಗಷ್ಟೇ ಮಳಿಗೆ ನೀಡಲು ಹಿಂದುತ್ವ ಸಂಘಟನೆಗಳಿಂದ ಒತ್ತಾಯ
ಮಾರಿಕಾಂಬ ಜಾತ್ರಾ ಮಹೋತ್ಸವದ ಸ್ಟಾಲ್ ಹಂಚಿಕೆ ವಿಚಾರದಲ್ಲಿ ನಡೆದ ಸಭೆ

ಶುಕ್ರವಾರ ಮಾರಿಕಾಂಬ ಸೇವಾ ಸಮಿತಿ ನಡೆಸಿದ ಸಭೆ
ಶಿವಮೊಗ್ಗ ಮಾ.18: ನಗರದ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಸಂಬಂಧ ಹಿಂದುತ್ವ ಸಂಘಟನೆಗಳೊಂದಿಗೆ ಮಾರಿಕಾಂಬ ಸೇವಾ ಸಮಿತಿಯು ಶುಕ್ರವಾರ ನಡೆಸಿದ ಸಭೆಯಲ್ಲಿ ಸ್ಟಾಲ್ ವಿಚಾರದಲ್ಲಿ ಬಿರುಸಿನ ಚರ್ಚೆ ನಡೆದಿದೆ.
ಹಿಂದುತ್ವ ಸಂಘಟನೆಯೊಂದರ ಮುಖಂಡ ದೀನ್ ದಯಾಳ್ ಮತ್ತು ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಎಂಬವರು ಸ್ಟಾಲ್ಗಳನ್ನು ಹಿಂದುಗಳಿಗಷ್ಟೇ ನೀಡಬೇಕು ಬೇರೆಯ ಧರ್ಮದವರಿಗೆ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.
ಈ ಗೊಂದಲವನ್ನು ಕಂಡು ಸ್ಟಾಲ್ ಗುತ್ತಿಗೆ ಹಿಡಿದಿದ್ದ ಚಿನ್ನಪ್ಪ ಅವರು ಭಿನ್ನಾಭಿಪ್ರಾಯಗಳ ನಡುವೆ ಗುತ್ತಿಗೆ ಹಿಡಿಯಲು ಸಾಧ್ಯವೇ ಇಲ್ಲ. ಹೀಗಾಗಿ, ಇದನ್ನು ಮೊದಲು ಬಗೆಹರಿಸಿಕೊಳ್ಳಿ ಎಂದು ಹೇಳಿ ಟೆಂಡರ್ನಿಂದ ಹಿಂದಕ್ಕೆ ಸರಿದರು. ಈ ವೇಳೆ ಮಾತನಾಡಿದ ಸೇವಾ ಸಮಿತಿಯ ಮುಖಂಡರು ಮಾರಿಕಾಂಬ ಜಾತ್ರೆ ಭಾವೈಕ್ಯತೆ ಉತ್ಸವವಾಗಿದ್ದು, ಧರ್ಮದ ಆಧಾರದ ಮೇಲೆ ಅವರಿಗೆ ಕೊಡಬೇಡಿ, ಇವರಿಗೆ ಕೊಡಬೇಡಿ ಎಂದು ಹೇಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಹಿಂದುತ್ವ ಸಂಘಟನೆಯವರು, ಜಾತ್ರೆಯಲ್ಲಿ ಸ್ಟಾಲ್ಗಳು ಇರಬೇಕು. ಅದು ಹಿಂದೂಗಳಿಂದಲೇ ನಡೆಯಬೇಕು. ಹಿಂದೂಗಳನ್ನು ಹೊರತುಪಡಿಸಿ ಬೇರೆಯವರಿಗೆ ಅವಕಾಶ ನೀಡಿದರೇ, ಇವತ್ತಿನ ವಾತಾವರಣದಲ್ಲಿ ಹಿಂದೂಗಳಿಗೆ ಅಪಮಾನವಾಗಲಿದೆ ಎಂಬ ಅಭಿಪ್ರಾಯಪಟ್ಟರು.
ಅರ್ಧದಷ್ಟು ಸ್ಟಾಲ್ಗಳನ್ನು ಹಿಡಿಯಲು ನಾವು ಸಿದ್ಧ ಎಂದು ದೀನ್ ದಯಾಳ್ ಹೇಳಿದರೆ, ಮಾರಿಹಬ್ಬಕ್ಕೆ ಹಣದ ಕೊರತೆಯಾದರೆ ಹಿಂದೂ ಸಮಾಜ ಹಣ ಸಂಗ್ರಹಿಸಿ ನೀಡುವುದು ಎಂದು ಚನ್ನಬಸಪ್ಪ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾರಿಕಾಂಬ ಸೇವಾ ಸಮಿತಿ, ಹರಾಜಿನಿಂದಲೇ ಹಣ ಸಂಗ್ರಹವಾಗಬೇಕು. ಸಂಗ್ರಹಿಸುವ ಹಣ ಜಾತ್ರೆಗೆ ಬೇಡ. ಅಲ್ಲದೆ 9 ಲಕ್ಷದ ಮೇಲೆ ಸಾವಿರದೊಂದು ರೂಪಾಯಿಯನ್ನು ಯಾರೇ ಕಟ್ಟಿದರೂ ಟೆಂಡರ್ ಬಿಟ್ಟುಕೊಡಲಾಗುವುದು ಎಂದು ಸಮಿತಿ ಸದಸ್ಯರು ತಿಳಿಸಿದ್ದು, ಇದರ ಬೆನ್ನಲ್ಲೆ ಹಿಂದುತ್ವ ಸಂಘಟನೆಗಳು ಟೆಂಡರ್ ಮೊತ್ತವನ್ನು ಕೊಡುವುದಾಗಿ ಘೋಷಿಸಿದವು.







