ಅಪನಂಬಿಕೆ ದೂರಮಾಡಲು ಅಂತರ್ ಧರ್ಮೀಯ ಸಂವಾದ ಅಗತ್ಯ: ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೆ

ಮಂಗಳೂರು : ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದ್ದು, ಯಾವ ಧರ್ಮವೂ ದ್ವೇಷವನ್ನು ಸಾರುವುದಿಲ್ಲ. ಧರ್ಮಗಳ ಬಗೆಗಿನ ಅಪನಂಬಿಕೆ ಹೋಗಲಾಡಿಸಲು ಅಂತರ್ ಧರ್ಮೀಯ ಸಂವಾದಗಳು ನಡೆಯುತ್ತಿರಬೇಕು ಎಂದು ಗೋವಾದ ರಾಜ್ಯಪಾಲ ಶ್ರೀಧರನ್ ಪಿಳ್ಳೆ ಅವರು ಹೇಳಿದರು.
ಅವರು ಶುಕ್ರವಾರ ಮಂಗಳೂರಿನ ಕಂಕನಾಡಿಯ ಬಾಲಿಕಾಶ್ರಮ ರಸ್ತೆಯ ಬಳಿ ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ಬ್ರಹ್ಮಾವರ ಧರ್ಮ ಪ್ರಾಂತ್ಯದ ವತಿಯಿಂದ ನಿರ್ಮಿಸಿರುವ ಧರ್ಮಾಧ್ಯಕ್ಷರ ನಿವಾಸ ಮತ್ತು ಪ್ರಾರ್ಥನಾ ಮಂದಿರದ ಉದ್ಘಾಟನೆ ಹಾಗೂ ಆಶೀರ್ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದು.
ವಿವಿಧ ಧರ್ಮಗಳ ಮುಖಂಡರು ಒಟ್ಟು ಸೇರಿ ಸಂವಾದ ನಡೆಸುವುದರಿಂದ ವಿವಿಧ ಧರ್ಮಗಳ ತಿರುಳನ್ನು ಎಲ್ಲರೂ ತಿಳಿಯಲು ಸಾಧ್ಯವಾಗುತ್ತದೆ. ಇದರಿಂದ ಇನ್ನೊಂದು ಧರ್ಮದ ಬಗೆಗಿನ ತಪ್ಪು ಅಭಿಪ್ರಾಯಗಳು ದೂರವಾಗು ತ್ತವೆ. ಧಾರ್ಮಿಕ ಸೌಹಾರ್ದತೆ ಕಾಪಾಡಲು ಇದು ಸಹಾಯಕವಾಗುವುದು ಎಂದು ಶ್ರೀಧರನ್ ಪಿಳ್ಳೆ ಅಭಿಪ್ರಾಯ ಪಟ್ಟರು.
ಮಲಂಕರ ಆರ್ಥೊಡಾಕ್ಸ್ ಸಿರಿಯನ್ ಸಭೆಯ ನೂತನ ಪರಮಾಧ್ಯಕ್ಷ ಮಾರ್ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್ ತೃತೀಯ ಅವರು ಆಶೀರ್ವಚನ ಮಾಡಿದರು.
ಪರಮಾಧ್ಯಕ್ಷ ಮಾರ್ ಬಸೆಲಿಯೋಸ್ ಮಾರ್ಥೋಮಾ ಮ್ಯಾಥ್ಯೂಸ್ ತೃತೀಯ ಅವರು ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಶನ್ ಹಾಲ್‌ನಲ್ಲಿ ಏರ್ಪಡಿಸಿದ್ದ ಭವ್ಯ ಸ್ವಾಗತ ಸಮಾರಂಭವನ್ನು ಶ್ರೀಧರನ್ ಪಿಳ್ಳೆ ಅವರು ಉದ್ಘಾಟಿಸಿ ಮಾತನಾಡಿದರು.
ಬ್ರಹ್ಮಾವರ ಧರ್ಮ ಪ್ರಾಂತ್ಯದ ಬಿಷಪ್ ಅ. ವಂ. ಯಾಕೋಬ್ ಮಾರ್ ಎಲಿಯಾಸ್ ಮೆಟ್ರೋಪೋಲಿಟನ್ ಅವರು ಅಧ್ಯಕ್ಷತೆ ವಹಿಸಿದ್ದರು.
ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಪರಮಪೂಜ್ಯ ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ಅವರನ್ನು ಮಂಗಳೂರು ಬಿಷಪ್ ಅತಿ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶಾಲು ಹೊದಿಸಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ಅವರ ಮಂಗಳೂರು ಭೇಟಿಯು ಸಂಬಂಧವನ್ನು ಮತ್ತಷ್ಟು ಬಲಗೊಳಿಸಿದೆ ಎಂದರು.
ಬೆಳ್ತಂಗಡಿಯ ಬಿಷಪ್ ಅತಿ ವಂ.ಡಾ. ಲಾರೆನ್ಸ್ ಮುಕ್ಕುಝಿ, ಪುತ್ತೂರು ಬಿಷಪ್ ಅತಿ ವಂ. ಡಾ. ಗೀವರ್ಗೀಸ್ ಮಾರ್ ಮಕರಿಯೋಸ್, ಚೆನ್ನೈ ಬಿಷಪ್ ಅತಿ ವಂ. ಡಾ. ಯುಹನಾನ್ ಮಾರ್ ಡಯಾಸ್‌ಕೊರೊಸ್, ಮಲಬಾರ್ ಧರ್ಮ ಪ್ರಾಂತ್ಯದ ಕಾರ್ಯದರ್ಶಿ ವಂ. ತೋಮಸ್ ಕುರಿಯನ್ ತಝಯಿಲ್, ಆರ್ಥೊಡಾಕ್ಸ್ ಸಭೆಯ ಕಾರ್ಯದರ್ಶಿ ಬಿಜು ಊಮ್ಮನ್, ಬ್ರಹ್ಮಾವರದ ಗುರು ವಂ. ಲಾರೆನ್ಸ್ ಡಿ ಸೋಜಾ ಅವರು ಪರಮಾಧ್ಯಕ್ಷರನ್ನು ಅಭಿನಂದಿಸಿದರು.
ಆಶೀರ್ವಚನ ನೀಡಿದ ಬಸಲಿಯೋಸ್ ಮಾರ್ಥೋಮಾ ಮಾಥ್ಯೂಸ್ ತೃತೀಯ ಅವರು ಮಂಗಳೂರು ಕೇಂದ್ರದ ಮೂಲಕ ಸೇವಾ ಕಾರ್ಯಗಳು ನಡೆದು ಜನರ ಪ್ರೀತಿಗೆ ಪಾತ್ರವಾಗಲಿ ಎಂದು ಹರಸಿದರು.
ಆರ್ಥೊಡಾಕ್ಸ್ ಸಭೆಯ ಬಿಷಪರಾದ ಅತಿ ವಂ. ಕುರಿಯಾಕೋಸ್ ಮಾರ್ ಕ್ಲೆಮಿಸ್, ಅತಿ ವಂ. ಝಕಾರಿಯಾ ಮಾರ್ ಅಂತೋನಿಯೋಸ್, ಅತಿ ವಂ. ಯುಹನಾನ್ ಮಾರ್ ಪೊಲಿಕಾರ್ಪೊಸ್, ಅತಿ ವಂ. ಅಬ್ರಹಾಂ ಮಾರ್ ಎಪಿಫನಿಯೋಸ್, ಅತಿ ವಂ. ಡಾ.ಗೀವರ್ಗೀಸ್ ಮಾರ್ ಯುಲಿಯಾಸ್, ಅತಿ ವಂ.ಡಾ.ಅಬ್ರಹಾಂ ಮಾರ್ ಸೆರಫಿಮ್, ಅತಿ ವಂ. ಯುಹಾನಾನ್ ಮಾರ್ ಡಿಮಿಟ್ರಿಯೋಸ್ ಮತ್ತಿತರರು ವೇದಿಕೆಯಲ್ಲಿದ್ದರು.
ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ, ಕಾರ್ಪೊರೇಟರ್ ನವೀನ್ ಡಿ ಸೋಜಾ ಅವರು ಭಾಗವಹಿಸಿದ್ದರು. ಧರ್ಮ ಪ್ರಾಂತ್ಯದ ಕಾರ್ಯದರ್ಶಿ ವಂ. ಕುರಿಯಾಕೋಸ್ ತೋಮಸ್ ಪಳ್ಳಿಚಿರ ಸ್ವಾಗತಿಸಿ ಆಡಳಿತ ಮಂಡಳಿ ಸದಸ್ಯ ಜಾನ್ಸನ್ ಕಟ್ಟೂರ್ ವಂದಿಸಿದರು.