‘‘ಅವರ ಸಂದೇಶ ಪ್ರಸಾರ ಮಾಡುವುದು ನಮ್ಮ ಕರ್ತವ್ಯ’’: ತ.ನಾ. ಸರಕಾರದಿಂದ ಪೆರಿಯಾರ್ ಕೃತಿಗಳ ಭಾಷಾಂತರ

Photo: PTI
ಚೆನ್ನೈ, ಮಾ. 18: ಸಮಾಜ ಸುಧಾರಕ ಹಾಗೂ ದ್ರಾವಿಡ ಕಳಗಂ ಸ್ಥಾಪಕ ಪೆರಿಯಾರ್ ಅವರ ಚಿಂತನೆಯನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಲು ಅವರ ಕೃತಿಗಳನ್ನು 21 ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಿಸಲು ತಮಿಳುನಾಡು ಸರಕಾರ ನಿರ್ಧರಿಸಿದೆ. ಇಲ್ಲಿ ಶುಕ್ರವಾರ 2022-23 ವಿತ್ತ ವರ್ಷದ ರಾಜ್ಯ ಬಜೆಟ್ ಅನ್ನು ಪ್ರಸ್ತುತಪಡಿಸುವ ಸಂದರ್ಭ ಹಣಕಾಸು ಸಚಿವ ಪಳನಿವೇಲ್ ತ್ಯಾಗ ರಾಜನ್ ಅವರು, ಅವರ ಕೃತಿಗಳು ಮುದ್ರಣ ಹಾಗೂ ಡಿಜಿಟಲ್ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಈ ಉದ್ದೇಶಕ್ಕಾಗಿ 5 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ ಎಂದರು.
ಸಾಮಾಜಿಕ ನ್ಯಾಯ ಸಾಧನೆಗೆ, ವೈಚಾರಿಕತೆಯನ್ನು ಪ್ರಚಾರ ಮಾಡಲು ಹಾಗೂ ಮಹಿಳೆಯರ ಅಧೀನತೆಯನ್ನು ನಿರ್ಮೂಲನಗೊಳಿಸಲು ತಂದೈ ಪೆರಿಯಾರ್ ಅವರು ತನ್ನ ಕೊನೆಯ ಉಸಿರು ಇರುವ ವರೆಗೆ ಕಾರ್ಯ ನಿರ್ವಹಿಸಿದರು ಎಂದು ತ್ಯಾಗ ರಾಜನ್ ತಿಳಿಸಿದರು. ‘‘ಅವರ ಚಿಂತನೆ ಹಾಗೂ ಬರೆಹಗಳು ಕಾಲಾತೀತವಾಗಿವೆ. ಅವರ ಸಂದೇಶ ಹಾಗೂ ಬರೆಹಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡುವುದು ಸರಕಾರದ ಕರ್ತವ್ಯ. ಅವರ ಪ್ರಗತಿಪರ ಆಲೋಚನೆಗಳಿಂದ ಸಂಪೂರ್ಣ ಮಾನವ ಸಮುದಾಯ ಲಾಭ ಪಡೆಯಲಿದೆ’’ ಎಂದು ರಾಜನ್ ಹೇಳಿದರು.
ಪೆರಿಯಾರ್ ಅವರ ಬರಹಗಳನ್ನು ಭಾಷಾಂತರಿಸಲು ಹಾಗೂ ಪ್ರಕಟಿಸಲು ತಮ್ಮ ಅನುಮತಿಯನ್ನು ರಾಜ್ಯ ಸರಕಾರ ಕೋರಿದೆ. ತಾವು ಸಂತೋಷದಿಂದ ಒಪ್ಪಿಕೊಂಡಿದ್ದೇವೆ ಎಂದು ದ್ರಾವಿಡ ಕಳಗಂನ ಮುಖ್ಯಸ್ಥ ವೀರಮಣಿ ತಿಳಿಸಿದ್ದಾರೆ. ಪೆರಿಯಾರ್ ಅವರ ಬರಹಗಳ ಯಾವುದೇ ಪದಗಳನ್ನು ಬದಲಾಯಿಸದೆ ಪ್ರಕಟಿಸಲು ಪ್ರಕಟನಾ ಸಂಸ್ಥೆಗೆ ಪೆರಿಯಾರ್ ಟ್ರಸ್ಟ್ ಅನುಮತಿ ನೀಡಿದೆ ಎಂದು ವೀರಮಣಿ ಹೇಳಿದ್ದಾರೆ.







